ಹುಬ್ಬಳ್ಳಿ, ಏ.೧೫: ಟಿಕೆಟ್ ಸಿಗದಿದ್ದಕ್ಕೆ ಮುಂದಿನ ನಡೆ ಏನೆಂಬುದರ ಕುರಿತು ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ತಮ್ಮ ರಾಜಕೀಯ ನಡೆಯ ಕುರಿತು ಏನು ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ವಿ.ಪ. ಸದಸ್ಯ ಪ್ರದೀಪ್ ಶೆಟ್ಟರ್ ಅವರು ಬೆಳಿಗ್ಗೆ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ಚರ್ಚೆಯನ್ನು ಸಹ ಮಾಡಿದ್ದು, ಶೆಟ್ಟರ್ ಮುಂದಿನ ಹೆಜ್ಜೆ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.
ಬೆಂಬಲಿಗರೊಂದಿಗಿನ ಚರ್ಚೆಯ ನಂತರ ಅವರ ಮುಂದಿನ ನಿರ್ಧಾರ ಕೌತುಕಕ್ಕೆ ಕಾರಣವಾಗಿದೆ.ಇಂದು ಬೆಳಿಗ್ಗೆ ಅವರ ನಿವಾಸದ ಬಳಿ ಜಮಾಯಿಸಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಶೆಟ್ಟರ್ ಅವರಿಗೆ ಟಿಕೇಟ್ ನೀಡುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಎರಡನೇ ಪಟ್ಟಿಯಲ್ಲೂ ಅವರ ಹೆಸರು ಇರದೇ ಇರುವುದರಿಂದ ಅವರಿಗೆ ಅಸಮಾಧಾನ ಉಂಟಾಗಿತ್ತು. ವರಿಷ್ಠರ ಬುಲಾವ್‌ನ ನಂತರವೂ ಈ ಬಗ್ಗೆ ದೃಢ ನಿರ್ಧಾರಗಳು ಹೊರ ಬಿದ್ದಿಲ್ಲ. ಒಂದು ವೇಳೆ ಅವರಿಗೆ ಟಿಕೇಟ್ ಸಿಗದಿದ್ದರೆ ಪಕ್ಷೇತರರಾಗಿಯೂ ನಿಲ್ಲುತ್ತೇನೆ ಎಂಬ ಸುಳಿವನ್ನು ನೀಡುತ್ತಲೇ ಬಂದಿದ್ದಾರೆ. ಈ ನಡೆಯಿಂದಾಗಿ ಪಕ್ಷಕ್ಷೆ ಹಾನಿಯಾಗುವ ಸಂಭವವೂ ಇದೆ ಎಂಬ ಕುರಿತು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದು, ಅವರಿಗೆ ಟಿಕೆಟ್ ನೀಡುವಲ್ಲಿ ಬಿಜೆಪಿ ಹೈಕಮಾಂಡ್
ಮೀನಾಮೇಷ ಎನಿಸುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಮುಂಜಾನೆಯಿಂದ ಶೆಟ್ಟರ್ ಅವರ ಮನೆಯ ಮುಂದೆ ನೆರೆದಿದ್ದ ಶೆಟ್ಟರ್ ಬೆಂಬಲಿಗರಿಂದ ಶೆಟ್ಟರ್ ಪರ ಘೋಷಣೆಗಳು ಕೇಳಿಬಂದವು.