ಶೆಟ್ಟರ್ ದೆಹಲಿ ಭೇಟಿ ಕುತೂಹಲಕ್ಕೆ ಎಡೆ

ಬೆಂಗಳೂರು, ಸೆ. ೧೪- ಕೈಗಾರಿಕಾ ಸಚಿವ ಜಗದೀಶ್‌ಶೆಟ್ಟರ್ ಅವರು ದೆಹಲಿ ಯಾತ್ರೆ ಕೈಗೊಂಡು ವರಿಷ್ಠ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿ ರಾಜ್ಯಕ್ಕೆ ಮರಳಿದ ನಂತರ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷದ ಭವಿಷ್ಯದ ನಾಯಕನಿಗಾಗಿ ಹುಡುಕಾಟಗಳು ಬಿರುಸುಗೊಂಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಂತರ ಬಿಜೆಪಿಗೆ ಹೊಸ ನಾಯಕನ ತಲಾಶ್‌ನಲ್ಲಿರುವ ಪಕ್ಷದ ಹೈಕಮಾಂಡ್ ಭವಿಷ್ಯದ ನಾಯಕತ್ವದ ಬಗ್ಗೆ ರಾಜ್ಯದ ಹಲವು ಪ್ರಮುಖ ಮುಖಂಡರ ಜತೆ ಚರ್ಚಿಸಿ ಅಭಿಪ್ರಾಯಗಳನ್ನು ಪಡೆಯುತ್ತಿದೆ. ಅದರಂತೆ ಸಚಿವ ಜಗದೀಶ್‌ಶೆಟ್ಟರ್ ಅವರನ್ನು ದೆಹಲಿಗೆ ಕರೆಸಿಕೊಂಡು ಅವರ ಅಭಿಪ್ರಾಯ ಆಲಿಸಲಾಗಿತ್ತು.
ಯಡಿಯೂರಪ್ಪ ಅವರ ನಂತರ ಪಕ್ಷವನ್ನು ಮುನ್ನಡೆಸುವ ನಾಯಕರ ತಲಾಶ್‌ನಲ್ಲಿ ಹೈಕಮಾಂಡ್ ನಿರತರಾಗಿರುವಾಗಲೇ ರಾಜ್ಯದಲ್ಲೂ ನಾಯಕತ್ವ ಸಂಬಂಧ ಚಟುವಟಿಕೆಗಳು ಬಿರುಸುಗೊಂಡಿವೆ.
ಒಂದು ವೇಳೆ ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾದರೆ ಆ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರನ್ನು ಕೂರಿಸಲು ಚಟುವಟಿಕೆಗಳು ನಡೆದಿವೆ.
ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮಠಾಧೀಶರೊಬ್ಬರು ನಾಯಕತ್ವ ಬದಲಾವಣೆ ಸಂಬಂಧ ನಡೆಸಿರುವ ಪ್ರಯತ್ನಗಳು ಕೆಲ ಶಾಸಕರ ಅಸಮಾಧಾನದ ಬೆಂಕಿ ತುಪ್ಪು ಸುರಿದಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಕೆಲ ಶಾಸಕರು ಅಸಮಾಧಾನಗೊಂಡಿದ್ದು, ಅವರ ವಿರುದ್ಧ ವರಿಷ್ಠರಿಗೆ ದೂರು ನೀಡಲು ದೆಹಲಿಗೆ ತೆರಳುವ ಬಗ್ಗೆಯೂ ಈ ಶಾಸಕರುಗಳು ಚರ್ಚೆ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಚಿವ ಜಗದೀಶ್‌ಶೆಟ್ಟರ್ ಅವರ ದೆಹಲಿ ಯಾತ್ರೆ ನಂತರ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಬರುವ ೨೧ ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದು, ಈ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸಾಗುವ ಸಾಧ್ಯತೆಗಳಿವೆ. ಇದೆಲ್ಲಾ ಬೆಳವಣಿಗೆಳನ್ನು ಅರಿತಿರುವ ಯಡಿಯೂರಪ್ಪನವರು ಎಲ್ಲದಕ್ಕೂ ಮದ್ದು ಅರೆಯಲು ಇದೇ ತಿಂಗಳ ೧೭ ರಂದು ದೆಹಲಿಗೆ ತೆರಳುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ದೆಹಲಿ ಭೇಟಿ ನಂತರ ರಾಜ್ಯ ರಾಜಕಾರಣ ಯಾವ ದಿಕ್ಕಿಗೆ ತಿರುಗುತ್ತದೋ ಹೇಳಲು ಬಾರದು.