ಹುಬ್ಬಳ್ಳಿ,ಏ೨೮-ರಾಜ್ಯದ ಗಮನ ಸೆಳೆದಿರುವ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಪ್ರಚಾರಕ್ಕಾಗಿ ಆಗಮಿಸಿರುವ ಚಿತ್ರ ನಟ ಕಿಚ್ಚ ಸುದೀಪ ಕ್ಷೇತ್ರದಲ್ಲಿಂದು ಭರ್ಜರಿ ರೋಡ್ ಶೋ ನಡೆಸಿ ಭರ್ಜರಿ ಜನಮನ ಸೆಳೆದರು.
ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂತು
ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿರುವ ನಟ ಸುದೀಪ್ ಆಗಮಿಸುತ್ತಿದ್ದಂತೆ ರಸ್ತೆಗಳ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪುಷ್ಪವೃಷ್ಟಿ ಗರೆದರು.
ರಾಜಾಜಿ ನಗರ ದೇವಾಂಗಪೇಟದಿಂದ ಬೆಂಗೇರಿ, ಕಲ್ಮೇಶ್ವರ ದೇವಸ್ಥಾನದವರೆಗೆ ನಡೆದ ರೋಡ್ ಶೋದಲ್ಲಿ ಸುದೀಪ್ ಅವರ ಅಭಿಮಾನಿಗಳ ಜಯಕಾರ ಮುಗಿಲು ಮುಟ್ಟಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಬಿಜೆಪಿಯವರು ನಿಮಗೆಲ್ಲ ಒಳ್ಳೆಯದಾಗುತ್ತದೆ ಎಂಬ ಭರವಸೆಯಿಂದ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದಾರೆ. ಮಹೇಶರನ್ನು ಬೆಂಬಲಿಸಿ, ಗೆಲ್ಲಿಸಿ ಎಂದು ಮನವಿ ಮಾಡಿದರು.
ಚಿತ್ರರಂಗದಲ್ಲಿ ನನ್ನನ್ನು ಉಳಿಸಿ ಬೆಳೆಸಿದ್ದೀರಿ, ಇನ್ನೂ ಒಳ್ಳೆಯ ಚಿತ್ರಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.