ಶೆಟ್ಟರ್‌ಗೆ ಪಕ್ಷದಿಂದ ಅನ್ಯಾಯ ಆಗಿಲ್ಲ:ಬಿಎಸ್‌ವೈ

ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಧಮೇಂದ್ರ ಪ್ರಧಾನ್, ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ.

ಬೆಂಗಳೂರು,ಏ.೧೬:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟದ್ದು ಸರಿಯಲ್ಲ. ಪಕ್ಷದಲ್ಲಿ ಎಲ್ಲ ಅಧಿಕಾರವನ್ನೂ ಅನುಭವಿಸಿದ್ದಾರೆ. ಪಕ್ಷದಲ್ಲಿ ಅವರಿಗೆ ಏನು ಅನ್ಯಾಯ ಮಾಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರೂ ಈಗಲೂ ತಮ್ಮ ನಿರ್ಧಾರವನ್ನು ವಾಪಸ್ ಪಡೆದು ಬಿಜೆಪಿಗೆ ಮರಳಲಿ. ಅವರಿಗೆ ಸೂಕ್ತ ಸ್ಥಾನಮಾನವನ್ನು ಕೊಡುತ್ತೇವೆ ಎಂದರು.
ಶೆಟ್ಟರ್ ಅವರು ಜನಸಂಘದ ಕಾಲದಿಂದಲೂ ಇದ್ದವರು. ಬಿ.ಬಿ. ಶಿವಪ್ಪರವರನ್ನು ಎದುರು ಹಾಕಿಕೊಂಡು ಯುವಕ ಬೆಳೆಯಲಿ ಎಂಬ ಕಾರಣಕ್ಕೆ ವಿಪಕ್ಷ ನಾಯಕನನ್ನಾಗಿ ನಾನು ಅನಂತ್‌ಕುಮಾರ್ ಮಾಡಿದೆವು. ಶೆಟ್ಟರ್ ಅವರ ಬೆನ್ನಿಗೆ ನಿಂತೆವು, ಅವರು ಈ ಎತ್ತರಕ್ಕೆ ಬೆಳೆಯಲು ಪಕ್ಷ ಕಾರಣ, ಪಕ್ಷ ಗುರುತಿಸದೆ ಇದ್ದರೆ ಸಿಎಂ ಆಗುತ್ತಿರಲಿಲ್ಲ. ಈಗ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದು ಅಪರಾಧ, ದ್ರೋಹ ರಾಜ್ಯದ ಜನತೆ ಇದನ್ನು ಕ್ಷಮಿಸುವುದಿಲ್ಲ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷ ನನ್ನನ್ನು ೪ ಬಾರಿ ಸಿಎಂ ಮಾಡಿದೆ. ಲಿಂಗಾಯತರನ್ನು ಕಡೆಗಣಿಸಿಲ್ಲ. ಶೆಟ್ಟರ್‌ರವರ ನಡೆಯಿಂದ ಕಾರ್ಯಕರ್ತರು ವಿಚಲಿತರಾಗುವುದು ಬೇಡ, ನಾನು ಶೆಟ್ಟರ್ ಜತೆ ಮಾತನಾಡಿದ್ದೇನೆ. ಅವರ ತೀರ್ಮಾನ ಸರಿಯಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾನು ಇನ್ನೂ ಗಟ್ಟಿ ಇದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿ ಜನರಿಗೆ ಸತ್ಯ ಹೇಳುತ್ತೇನೆ. ಇವರ ಬಂಡಾವಳ ಬಯಲು ಮಾಡುತ್ತೇನೆ ಎಂದು ಯಡಿಯೂರಪ್ಪ ಶೆಟ್ಟರ್ ಹಾಗೂ ಸವದಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ಶೆಟ್ಟರ್‌ರವರನ್ನು ನಿವೃತ್ತಿಯಾಗಿ ಎಂದು ಪಕ್ಷ ಹೇಳಿಲ್ಲ. ಪಕ್ಷ ಕೇಂದ್ರ ಸಚಿವ ಸ್ಥಾನ ಕೊಡುವುದಾಗಿ ಹೆಳಿತ್ತು. ನಮಗೆ ಹೈಕಮಾಂಡ್ ಸುಪ್ರೀಂ ಹೈಕಮಾಂಡ್‌ನಿಂದ ಶೆಟ್ಟರ್‌ಗೆ ಅನ್ಯಾಯವಾಗಿಲ್ಲ ಎಂದರು.
ಲಕ್ಷ್ಮಣ ಸವದಿ ವಿರುದ್ಧವೂ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದ ಯಡಿಯೂರಪ್ಪರವರು, ಸವದಿಯನ್ನು ಬಿಜೆಪಿಗೆ ಕರೆದು
ಶಾಸಕರನ್ನಾಗಿಸಿ ಮಂತ್ರಿ ಮಾಡಿದೆವು. ಚುನಾವಣೆ ಸೋತ ಮೇಲೆ ಉಪಮುಖ್ಯಮಂತ್ರಿ ಮಾಡಿದೆವು. ಅವರ ಪರಿಷತ್ ಸ್ಥಾನ ೫ ವರ್ಷ ೨ ತಿಂಗಳು ಇತ್ತು, ಮತ್ತೆ ಸಚಿವರನ್ನಾಗಿ ಮಾಡಲು ಅಡ್ಡಿ ಇರಲಿಲ್ಲ. ಇಷ್ಟಾದರೂ ಸವದಿ ವಿಶ್ವಾಸ ದ್ರೋಹ ನಂಬಿಕೆ ದ್ರೋಹ ಮಾಡಿದರು ಎಂದು ಕಿಡಿಕಾರಿದರು.
ಯಾರು ಹೊರ ಹೋದರೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೋದಿ ಅವರ ಜತೆ ನಾವೆಲ್ಲ ಹೆಜ್ಜೆ ಹಾಕಬೇಕು ಎಂದು ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಜ್ಯ ಚುನಾವಣಾ ಉಸುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಶೋಭಾಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ನಾರಾಯಣ ಛಲವಾದಿ, ಸಂಸದ ಲೆಹರ್‌ಸಿಂಗ್ ಉಪಸ್ಥಿತರಿದ್ದರು.