ಶೆಟ್ಟರ್‌ಗೆ ಕಾಂಗ್ರೆಸ್ ಗಾಳ

ಬೆಂಗಳೂರು,ಏ.೧೬:ಪ್ರಭಾವಿ ನಾಯಕರುಗಳು ಶಾಸಕರುಗಳ ಸಾಲು ಸಾಲು ರಾಜೀನಾಮೆಯಿಂದ ಕಂಗೆಟ್ಟಿರುವ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರ ರಾಜೀನಾಮೆ ಆಘಾತ ತಂದಿದ್ದು, ಬಿಜೆಪಿಯದಲ್ಲಿ ತಳಮಳ ಸೃಷ್ಟಿಸಿದೆ.
ಜಗದೀಶ್ ಶೆಟ್ಟರ್‌ರವರು ಪಕ್ಷ ಬಿಡುವುದರಿಂದ ಆಗುವ ಡ್ಯಾಮೇಜ್ ಕಂಟ್ರೋಲ್‌ಗೆ ಏನೇನಲ್ಲ ಮಾಡಲು ಸಾಧ್ಯ ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಮುಖ ಮುಖಂಡರು ಸಭೆ ನಡೆಸಿದ್ದಾರೆ. ಈ ನಡುವೆ ಜಗದೀಶ್ ಶೆಟ್ಟರ್‌ರವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನಗಳನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ.ಶೆಟ್ಟರ್‌ರವರ ಸಂಬಂಧಿಯಾಗಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಮೂಲಕವೂ ಶೆಟ್ಟರ್‌ರವರನ್ನು ಕಾಂಗ್ರೆಸ್‌ಗೆ ತರೆ ತರುವ ಪ್ರಯತ್ನವನ್ನು ಕೈ ನಾಯಕರು ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಶೆಟ್ಟರ್‌ರವರ ಜತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.ಬಿಜೆಪಿ ಬಿಡುವ ತೀರ್ಮಾನ ಮಾಡಿರುವ ಜಗದೀಶ್ ಶೆಟ್ಟರ್‌ರವರನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರ ಮೂಲಕ ಸಂಪರ್ಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶೆಟ್ಟರ್‌ರವರನ್ನು ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದು ಹೇಳಿರುವುದು ಗುಟ್ಟಾಗಿ ಉಳಿದಿಲ್ಲ. ಶಿರಸ್ಸಿಗೆ ಹೋಗಿ ಸಭಾಧ್ಯಕ್ಷರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶೇಷ ವಿಮಾನ ಕಳುಹಿಸುತ್ತೇನೆ. ಬೆಂಗಳೂರಿಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶೆಟ್ಟರ್‌ರವರಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಆದರೆ, ಶೆಟ್ಟರ್‌ರವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲವಾದರೂ ಕಾಂಗ್ರೆಸ್ ನಾಯಕರು ಮಾತ್ರ ತಮ್ಮಪ್ರಯತ್ನವನ್ನು ಕೈಬಿಡದೆ ಶೆಟ್ಟರ್‌ರವರನ್ನು ಕಾಂಗ್ರೆಸ್ ಸೇರ್ಪಡೆಗೆ ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ.ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದರೆ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಕಾಂಗ್ರೆಸ್ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಶೆಟ್ಟರ್‌ರವರ ತೀರ್ಮಾನ ಏನು ಎಂಬುದು ಕುತೂಹಲ ಮೂಡಿಸಿದೆ. ಸಂಜೆಯ ಹೊತ್ತಿಗೆ ಎಲ್ಲವೂ ನಿರ್ಧಾರವಾಗಲಿದೆ.
ಸಿಎಂ ಸಭೆ ಪ್ರತಿತಂತ್ರ
ಜಗದೀಶ್ ಶೆಟ್ಟರ್‌ರವರು ಪಕ್ಷ ಬಿಡುವ ನಿರ್ಧಾರದ ಬೆನ್ನಲ್ಲೆ ಹುಬ್ಬಳ್ಳಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಪ್ರಮುಖ ನಾಯಕರುಗಳ ಜತೆ ಸಭೆ ನಡೆಸಿ ಡ್ಯಾಮೇಜ್ ಕಂಟ್ರೋಲ್‌ಗೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಚರ್ಚಿಸಿದರು. ನಿನ್ನೆಯೂ ಸಹ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಜಗದೀಶ್ ಶೆಟ್ಟರ್‌ರವರ ಜತೆ ಸಂಧಾನ ಸಭೆ ನಡೆಸಿದ್ದರಾದರೂ ಅದು ವಿಫಲವಾಗಿತ್ತು. ಇಂದಿನ ಸಭೆಯಲ್ಲೂ ಜಗದೀಶ್ ಶೆಟ್ಟರ್‌ರವರನ್ನು ಕೊನೆಯದಾಗಿ ಮನವೊಲಿಸುವ ಚರ್ಚೆಗಳು ನಡೆದಿವೆ. ಒಂದು ವೇಳೆ ನಿರ್ಧಾರ ಬದಲಿಸದಿದ್ದರೆ ರಾಜಕೀಯವಾಗಿ ಏನೆಲ್ಲ ಮಾಡಲು ಸಾಧ್ಯ ಎಂಬ ಬಗ್ಗೆಯೂ ಮುಖ್ಯಮಂತ್ರಿ ನೇತೃತ್ವದ ಬಿಜೆಪಿ ಸಭೆಯಲ್ಲಿ ಸಮಾಲೋಚಿಸಲಾಗಿದೆ.
ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್,ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರುಗಳು ಭಾಗಿಯಾಗಿದ್ದರು.
ಬಿಜೆಪಿಗೆ ಆಘಾತ ಚುನಾವಣೆಯ ಮೇಲೆ ಪರಿಣಾಮ
ಈ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಇಲ್ಲ, ರಾಜಕೀಯ ನಿವೃತ್ತಿ ಪ್ರಕಟಿಸಿ ಎಂಬ ಬಿಜೆಪಿ ವರಿಷ್ಠರ ಸೂಚನೆಯಿಂದ ಅಸಮಾಧಾನಗೊಂಡ ಜಗದೀಶ್ ಶೆಟ್ಟರ್‌ರವರು ನಿನ್ನೆ ರಾತ್ರಿ ದಿಢೀರ್ ಎಂದು ಬಿಜೆಪಿ ಬಿಡುತ್ತಿರುವ ಬಗ್ಗೆ ಪ್ರಕಟಿಸಿ ಶಾಸಕ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.ಜಗದೀಶ್ ಶೆಟ್ಟರ್‌ರವರ ಈ ನಿರ್ಧಾರ ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್‌ರವರು ಪಕ್ಷ ಬಿಟ್ಟರೆ ಅದು ಚುನಾವಣೆಯ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದೆ. ಈಗಾಗಲೇ ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಜತೆಗೆ ಟಿಕೆಟ್ ಕೈ ತಪ್ಪಿರುವ ಹಲವು ಹಾಲಿ ಶಾಸಕರು ಕಾಂಗ್ರೆಸ್-ಜೆಡಿಎಸ್ ಸೇರಿದ್ದಾರೆ. ಇವೆಲ್ಲ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರವರನ್ನು ಇಳಿಸಿದಾಗಲೇ ಬಿಜೆಪಿಯ ಮತ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಹ ಚುನಾವಣಾ ಹೊಸ್ತಿಲಲ್ಲ. ಪ್ರಭಾವಿ ಲಿಂಗಾಯತ ನಾಯಕರುಗಳ ಪಕ್ಷ ನಿರ್ಗಮನ ಲಿಂಗಾಯತರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತುಗಳಿಗೆ ಪುಷ್ಠಿ ನೀಡಿದ್ದು, ಲಿಂಗಾಯತ ಸಮುದಾಯದ ವಿರುದ್ಧ ಬಿಜೆಪಿಯ ಕೆಲ ನಾಯಕರು ಷಡ್ಯಂತ್ರ ನಡೆಸಿದ್ದಾರೆ ಎಂಬ ಚರ್ಚೆಗಳು ನಡೆದಿವೆ. ಇವೆಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಅಪಾಯ ತಂದೊಡ್ಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೆಲ್ಲ ಸರಿಪಡಿಸಲು ಬಿಜೆಪಿ ನಾಯಕರುಗಳು ಹರಸಾಹಸ ನಡೆಸಿದ್ದಾರೆ. ಶೆಟ್ಟರ್‌ರವ ಮನವೊಲಿಸುವ ಪ್ರಯತ್ನಗಳು ನಡೆದಿವೆಯಾದರೂ ಅದು ಫಲ ನೀಡಿಲ್ಲ. ಶೆಟ್ಟರ್‌ರವರು ಕಾಂಗ್ರೆಸ್ ಸೇರುತ್ತಾರಾ ಇಲ್ಲ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರಾ ಎಂಬುದು ಕುತೂಹಕ್ಕೆಡೆ ಮಾಡಿದೆ. ಶೆಟ್ಟರ್‌ರವರ ನಿರ್ಧಾರ ಏನೇ ಆದರೂ ಈ ಎಲ್ಲ ಬೆಳವಣಿಗೆಗಳು ಬಿಜೆಪಿಗಂತೂ ಮಾರಕವಾಗುವ ಸಾಧ್ಯತೆಗಳು ಹೆಚ್ಚಿವೆ.

ಲಿಂಗಾಯತರನ್ನು ತುಳಿಯುವ ಪ್ರಯತ್ನ, ಬಿಜೆಪಿಗೆ ಮುಳುವು:ಶೆಟ್ಟರ್
ಬಿಜೆಪಿಯಲ್ಲಿ ಲಿಂಗಾಯತರನ್ನು ಗುರಿಯಾಗಿಸಿ ಅವರನ್ನು ತುಳಿಯುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆದಿವೆ. ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಹಿರಿಯರನ್ನು ಕಡೆಗಣಿಸಿ ಗೌರವ ಕೊಡದಿರುವುದು ಬಿಜೆಪಿಗೆ ಮುಳುವಾಗುತ್ತದೆ ಎಂದಿದ್ದಾರೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಲುವ ಮುನ್ನ ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿಯ ತಳಮಟ್ಟದ ಪರಿಸ್ಥಿತಿಯ ಬಗ್ಗೆ ಏನೂ ಗೊತ್ತಿಲ್ಲ. ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಕೆಲ ಮುಖಂಡರು ನಡೆಸಿದ್ದಾರೆ ಎಂದರು.
ಪಕ್ಷದಲ್ಲಿ ವ್ಯವಸ್ಥಿತವಾಗಿ ಲಿಂಗಾಯತರನ್ನು ತುಳಿಯುವ ಷಡ್ಯಂತ್ರಗಳು ನಡೆದಿವೆ. ನಾನು ಎಲ್ಲ ಸಮುದಾಯವನ್ನು ಸಮನಾಗಿ ಕಂಡಿದ್ದೇನೆ ಎಂದರು.ರಾಜ್ಯ ಬಿಜೆಪಿ ಉಸ್ತುವಾರಿಗಳು ಹಾಗೂ ಇಲ್ಲಿನ ರಾಜ್ಯ ನಾಯಕರು ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬೇಡ ಎಂಬ ತೀರ್ಮಾನ ಮಾಡಿದಂತಿದೆ ಎಂದರು.
ಇಡಿ ದಾಳಿಗೆ ಹೆದರಲ್ಲ
ಇಡಿ-ಐಟಿ ದಾಳಿ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಕಾನೂನುಮೀರಿ ನಾನೂ ಏನನ್ನೂ ಮಾಡಿಲ್ಲ. ಭಯ ಇಲ್ಲದಿರುವುದಕ್ಕೆ ಬಿಜೆಪಿ ಬಿಟ್ಟು ಬಂದಿರುವೆ ಎಂದರು.
ಇಂದು ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ಹಾಗೆಯೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು.
ಕಾಂಗ್ರೆಸ್ ನಾಯಕರ್‍ಯಾರು ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಕಾಂಗ್ರೆಸ್ ಪರವಾಗಿರುವ ಕೆಲವರು ನನ್ನನ್ನು ಭೇಟಿ ಮಾಡಿದ್ದಾರೆ. ನಾನು ಇನ್ನೂ ಯಾವ ತೀರ್ಮಾನವನ್ನು ಮಾಡಿಲ್ಲ ಎಂದರು.

ನೋವು ತಂದಿದೆ;ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ ಬೊಮ್ಮಾಯಿ
ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರು ಬಿಜೆಪಿ ಬಿಡುತ್ತಿರುವುದು ತಮಗೆ ನೋವು ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಗದೀಶ್ ಶೆಟ್ಟರ್ ಅವರ ಪಕ್ಷ ಬಿಡುವ ತೀರ್ಮಾನದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಅದಕ್ಕೆ ತಂತ್ರ-ಪ್ರತಿತಂತ್ರ ರೂಪಿಸುತ್ತೇವೆ ಎಂದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಹುದ್ದೆ ನೀಡುವುದಾಗಿ ವರಿಷ್ಠರು ಹೇಳಿದ್ದರು. ಆದರೂ ಅವರು ಪಕ್ಷ ಬಿಡುವ ತೀರ್ಮಾನ ಮಾಡಿದ್ದಾರೆ. ಇದು ತಮಗೆ ನೋವು ತಂದಿದೆ ಎಂದರು.
ಜಗದೀಶ್ ಶೆಟ್ಟರ್ ಅವರು ಪಕ್ಷದಲ್ಲೇ ಮುಂದುವರೆಯಬೇಕಾಗಿತ್ತು. ಹೈ ಕಮಾಂಡ್ ಮಟ್ಟದಲ್ಲೇ ಎಲ್ಲವೂ ತೀರ್ಮಾನವಾಗಿದೆ. ರಾಜ್ಯ ನಾಯಕರ ಪಾತ್ರ ಏನಿಲ್ಲ, ಹೊಸ ಪೀಳಿಗೆಗೆ ಅವಕಾಶ ಕೊಡುವ ಕಾರಣಕ್ಕಾಗಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೈತಪ್ಪಿದೆ ಎಂದರು.