ಶೃತಿ ಸಾಹಿತ್ಯ ಮೇಳ: ಕುವೆಂಪು ಜನ್ಮ ದಿನಾಚರಣೆ

ರಾಯಚೂರು.ಡಿ.೩೦- ರಾಷ್ಟ್ರಕವಿ ಕುವೆಂಪು ಅವರು ನಾಡು ಕಂಡ ಶ್ರೇಷ್ಠ ದಾರ್ಶನಿಕರು, ಕ್ರಾಂತದರ್ಶಿಗಳು, ರಸ ಋಷಿಗಳು, ಯುಗದ ಕವಿಗಳು, ಮಹಾ ಮಾನವತ ವಾದಿಗಳು, ವಿಶ್ವ ಮಾನವತೆಯ ಪ್ರಜ್ಞೆಯನ್ನು ಬಿತ್ತಿದ ಶ್ರೇಷ್ಠ ಶಕ್ತಿಯ ಜಗದ ಕವಿಗಳು. ಇಂದಿನ ಸಂಕೀರ್ಣ ಸಮಾಜದಲ್ಲಿಯೂ ಅವರ ವಿಚಾರಧಾರೆಗಳು ಪ್ರಸ್ತುತತೆ ಮೂಲಕ ಜೀವಂತವಾಗಿವೆ. ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿಯವರು ಹೇಳಿದರು.
ಅವರು ನಿನ್ನೆ ಸಂಜೆ ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಅವರ ೧೧೯ ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡವೆಂದರೆ ಕುವೆಂಪು. ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಮಹಚೇತನ, ಅವರ ಸಣ್ಣ ಕಥೆಗಳು, ಕವನಗಳು, ಕಾದಂಬರಿಗಳು, ನಾಟಕಗಳು, ಮಹಾಕಾವ್ಯಗಳು, ವಿಮರ್ಶೆ ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಲ್ಲದೆ ಕನ್ನಡದ ಅಸ್ಮಿತತೆಗೆ ಕಾರಣ ಕರ್ತ ವಾಗಿವೆ.ಕುವೆಂಪು ಅವರು ವಿಶ್ವ ಕಂಡ ಅಪರೂಪದ ತತ್ವಜ್ಞಾನಿಗಳು ಎಂದು ಹೇಳಿದರು.
ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಶ್ರುತಿ ಸಾಹಿತ್ಯ ಮೇಳ ಕಳೆದ ೩೬ ವರ್ಷಗಳಿಂದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಡಾ.ಶಿವರಾಮ ಕಾರಂತ್, ಡಾ.ಲಕ್ಷ್ಮೀನಾರಾಯಣ ಭಟ್, ಕವಿ ಜಿ.ಎಸ್.ಶಿವರುದ್ರಪ್ಪ, ಪ್ರೊ. ನಿಸಾರ ಅಹ್ಮದ್, ಸುಮತಿಂದ್ರ ನಾಡಿಗ, ಗು.ರು ಚೆನ್ನಬಸಪ್ಪ ಖ್ಯಾತ ಸಂಗೀತಗಾರರಾದ ಸಿ.ಅಶ್ವತ್, ನಿರ್ದೇಶಕ ನಾಗಾಭರಣ ಮುಂತಾದವರನ್ನು ರಾಯಚೂರಿಗೆ ಆಹ್ವಾನಿಸಿ ಅವರಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ ಸಂಘಟನೆಯಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಕಾರ್ಯಕ್ರಮಗಳ ವಿವರವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ದಾಸೋತ್ಸವ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಕುಲಕರ್ಣಿ ಅವರು ಮಾತನಾಡಿ, ಕುವೆಂಪು ಅವರ ಪ್ರತಿಯೊಂದು ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತಿದೆ. ಇವುಗಳನ್ನು ಅಧ್ಯಯನ ಮಾಡುವುದರ ಮೂಲಕ ಜೀವನದಲ್ಲಿ ಸಚ್ಚಾರಿತ್ರೆಯನು ಬೆಳೆಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ನಂತರ ವಸುದೇಂದ್ರ ಸಿರವಾರ, ಜಯಕುಮಾರ ದೇಸಾಯಿ ಕಾಡ್ಲೂರು, ರವೀಂದ್ರ ಕುಲಕರ್ಣಿ ಅವರು ಮಾತನಾಡಿದರು. ಕಾರ್ಯಕ್ರಮವು ರವೀಂದ್ರ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತವನ್ನು ಕಾರ್ಯದರ್ಶಿ ರಮೇಶ್ ಕುಲಕರ್ಣಿ ಅವರು ಮಾಡಿದರು. ನಿರೂಪಣೆಯನ್ನು ಕಾರ್ಯದರ್ಶಿ ಜೆ.ಯಂ ವೀರೇಶ್ ಅವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಗಮಕ ಕಲಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ವೆಂಕಟರಾವ್ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರುತಿ ಸಾಹಿತ್ಯ ಮೇಳದ ಹಿರಿಯ ಸದಸ್ಯರಾದ ಸುರೇಶ್ ಕಲ್ಲೂರ್, ರಮಾಕಾಂತ್ ಕುಲಕರ್ಣಿ, ನರಸಿಂಹಮೂರ್ತಿ, ಪ್ರಸನ್ನ ಆಲಂಪಲ್ಲಿ, ರಾಘವೇಂದ್ರ ಜಾಗೀರ್ದಾರ್, ಕೊಪ್ಪರೇಶ್ ದೇಸಾಯಿ, ಪ್ರವೀಣ್ ಜಾಗೀರ್ದಾರ್, ವಾಸು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.