ಶೃತಿ ಗರಡಿ ಮಾಯಾ ಮೋಡಿ..

* ಚಿಕ್ಕನೆಟಕುಂಟೆ ಜಿ.ರಮೇಶ್‌

“ಮಹಾಸತಿ” ಧಾರಾವಾಹಿ ಮುಗಿದ ಸಮಯ. ಹೊಸ ನಿರ್ಮಾಣ ಸಂಸ್ಥೆ ಉದಯವಾಗಿತ್ತು. ಈ ಸಂಸ್ಥೆಯಲ್ಲಿ ನನಗೂ ಅವಕಾಶ ಸಿಗಬಾರದಾ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ಕಾಕತಾಳೀಯ ಎನ್ನುವಂತೆ ಕೆಲ ದಿನಗಳಲ್ಲಿ ನಿರ್ಮಾಣ ಸಂಸ್ಥೆಯಿಂದ ಕರೆ ಬಂತು. ಅವಕಾಶವೂ ಸಿಕ್ಕಿತು.. ಒಂದು ರೀತಿಯಲ್ಲಿ ಲಡ್ಡು ಬಾಯಿಗೆ ಬಂದಷ್ಟು ಖುಷಿ….”

ಮಾಡಲಿಂಗ್ ಬಗ್ಗೆ ಆಸಕ್ತಿ ಇಲ್ಲದೆ ವಿದ್ಯಾರ್ಥಿಯಾಗಿದ್ದಾಗ ಅಚಾನಕ್ ಆಗಿ ಸಿಕ್ಕ ಅವಕಾಶ ಬಳಸಿಕೊಂಡು, ದಕ್ಷಿಣ ಭಾರತ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಉತ್ತರ ಕರ್ನಾಟಕದ ಚೆಲುವೆ. ಅಲ್ಲಿಂದ ಧಾರಾವಾಹಿಯಲ್ಲಿಯೂ ಅವಕಾಶ. ಮೊದಲ ಧಾರಾವಾಹಿಯಲ್ಲಿ ಕಪಾಳಕ್ಕೆ ಹೊಡೆಸಿಕೊಂಡ ನಟಿ, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ.

ಯಾರು ಅಂತೀರಾ.. ಅವರೇ ಐಶ್ವರ್ಯ ಬಾಸ್ಪುರೆ. ನಟನೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಸಾಗರ್ ಪುರಾಣಿಕ್ ಸಹಕಾರದಿಂದ “ಮಹಾಸತಿ”ಯಲ್ಲಿ ಮೊದಲ ಬಾರಿಗೆ ನಾಯಕಿ ಅವಕಾಶ ಸಿಕ್ಕಿತ್ತು. ಒಂದು ವರ್ಷಗಳ ಕಾಲ ಚಿತ್ರೀಕರಣ ನಡೆಯಿತು,ಅದು ಮುಗಿದ ಮೇಲೆ ಮುಂದೇನು ಎನ್ನುವಾಗ ಆಸರೆಯಾದದ್ದೇ ನಟಿ ಶೃತಿ ನಾಯ್ಡು ಅವರ ಶೃತಿ ಚಿತ್ರಾಲಯ.

“ ಯಾರೇ ನೀ ಮೋಹಿನಿ” ಧಾರಾವಾಹಿಗಾಗಿ ಲುಕ್ ಟೆಸ್ಟ್ ಮಾಡಿ ಮೊದಲು ಬೆಳ್ಳಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು.ಎರಡು ಮೂರು ದಿನದ ಬಳಿಕ ಆಫೀಸಿಗೆ ಕರೆಸಿಕೊಂಡು, ಬೆಳ್ಳಿ ಪಾತ್ರ ಬೇಡ, ನಿಮ್ಮ ವಾಯ್ಸ್, ಲುಕ್‍ಗೆ ‘ಮಾಯಾ’ ಪಾತ್ರ ಸೂಕ್ತ ಅದನ್ನು ನಿರ್ವಹಿಸಿ ಎಂದರು.

ಮೊದಲ ಧಾರಾವಾಹಿಯಲ್ಲಿ ಪಾಸಿಟೀವ್ ಪಾತ್ರ ಮಾಡಿದ್ದೇನೆ ಎರಡನೇ ಧಾರಾವಾಹಿಯಲ್ಲಿ ನೆಗೆಟೀವ್ ಪಾತ್ರನಾ ನಾ ಒಲ್ಲ ಎಂದೆ..

ಶೃತಿ ನಾಯ್ಡು ಮತ್ತು ರಮೇಶ್ ಇಂದಿರಾ ಅವರು ಬೆಳ್ಳಿ ಪಾತ್ರಕ್ಕಿಂತ ಮಾಯಾ ಪಾತ್ರ ಮೋಡಿ ಮಾಡುತ್ತದೆ. ಇದನ್ನು ಒಪ್ಪಿಕೊಳ್ಳಿ.ಇನ್ನೂ ನಿಮಗೆ ಬಿಟ್ಟದ್ದು ಎಂದು ಸುಮ್ಮನಾದರು.

ಶೃತಿ ನಾಯ್ಡು ನಿರ್ಮಾಣ ಸಂಸ್ಥೆ ಎಂದರೆ ಬಾಲಾಜಿ ಟೆಲಿ ಫಿಲ್ಸ್ಮ ಇದ್ದಂತೆ ಮರು ಮಾತನಾಡದೆ ಅವರ ಮೇಲೆ ನಂಬಿಕೆ ಇಟ್ಟು ಒಪ್ಪಿಕೊಂಡೆ. 2019ರಲ್ಲಿ ಜೀ ವಾಹಿನಿಯ ಅತ್ಯುತ್ತಮ ವಿಲನ್ ಪ್ರಶಸ್ತಿ ಸಿಕ್ಕಿತು ಎಂದು ಬಣ್ಣದ ಬದುಕಿನ ಯಾನದ ಬಗ್ಗೆ ಮಾಹಿತಿ ಹಂಚಿಕೊಂಡರು ಐಶ್ವರ್ಯ.

ಅತ್ತೆ ಜೊತೆ ಸೇರಿದ ಕುತಂತ್ರಿ, ಕುರುಡಿ,ಮೋಹಿನಿ ಹೀಗೆ ಬೇರೆ ಬೇರೆ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು ಇದಕ್ಕೆ ಕಾರಣ ಶೃತಿ ನಾಯ್ಡು ಅವರು. ಪ್ರತಿಯೊಂದು ತಿದ್ದಿ ತೀಡಿ, ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಸಂಸ್ಥೆಗೆ ಸದಾ ಚಿರಋಣಿ ಎಂದರು.

ಮೊದಲ ಬಾರಿಗೆ ಹೊಡೆತ

ಮಹಾಸತಿ ಧಾರಾವಾಹಿಯ ಮೊದಲ ಸನ್ನಿವೇಶದಲ್ಲಿ ಕಪಾಳಕ್ಕೆ ಹೊಡೆಸಿಕೊಳ್ಳುವ ಸನ್ನಿವೇಶವಿತ್ತು. ಭಯದಿಂದಲೇ ನಟಿಸಿದ್ದೆ.ಆ ಬಳಿಕ ‘ಯಾರೇ ನೀ ಮೋಹಿನಿ’ ಧಾರಾವಾಹಿ ಜನಪ್ರಿಯತೆ ನಮಗೂ ಹೆಸರು ತಂದುಕೊಟ್ಟಿದೆ .ಈಗ ಜನ ಚಪ್ಪಾಳೆ ಹೊಡೆಯುತ್ತಾರೆ ಇದು ಖುಷಿಯ ಕ್ಷಣ.ಇದಕ್ಕೆಲ್ಲಾ ಶೃತಿ ನಾಯ್ಡ ಮತ್ತು ತಂಡ ಕಾರಣ ಎನ್ನುತ್ತಾರೆ ಐಶ್ವರ್ಯ ಬಾಸ್ಪುರೆ..

ಕಲಾ ಕುಟುಂಬದ ಹಿನ್ನೆಲೆ ಮತ್ತು ನಟನೆಯ ಬಗ್ಗೆ ಆಸಕ್ತಿಯೂ ಇಲ್ಲದೆ ಈ ಮಟ್ಟಕ್ಕೆ ಬೆಳದಿರುವುದು ಖುಷಿಯ ಸಂಗತಿ. ಸದ್ಯ ಎರಡು ಮೂರು ಅವಕಾಶ ಬಂದಿವೆ ಲಾಕ್ ಡೌನ್ ಮುಗಿದ ಬಳಿಕ ಅಂತಿಮವಾಗಲಿದೆ ಎಂದರು

ಜನರ ಪ್ರೀತಿ..

ಹಾಸನದಲ್ಲಿ ನಡದ ಘಟನೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮಹಿಳೆಯೊಬ್ಬರು ನನ್ನ ಬಳಿ ಬಂದು ಯಾಕಮ್ಮ ನೀನು ಬೆಳ್ಳಿಗೆ ಅಷ್ಟೊಂದು ಕಾಟ ಕೊಡ್ತೀಯಾ ಎಂದ ತರಾಟೆಗೆ ತೆಗೆದುಕೊಂಡಿದ್ದರು. ಅದು ಪಾತ್ರ ಎಂದು ಎಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಪಾತ್ರ ಜನರ ಮನಸ್ಸಿಗೆ ಇಡಿಸಿದೆ ಎಂದು ಆಗ ಅನ್ನಿಸಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು ಐಶ್ವರ್ಯ.