ಶೃತಿಯಾಗಲಿ ಕನ್ನಡ, ಕಾವ್ಯವಾಗಲಿ ದಸರಾ

ಮೈಸೂರು,ಅ.೧೫:ವಿಶ್ವ ವಿಖ್ಯಾತ ಮೈಸೂರು ದಸರಾ ಜೀವಂತ ಮಹಾ ಕಾವ್ಯವಾಗಬೇಕು. ವಿಜಯನಗರ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾ ಕಾವ್ಯ ಇದಾಗಿದ್ದು,
ದಸರಾ ಒಂದು ರೀತಿಯಲ್ಲಿ ಕಥಾ ಕಣಜವಾಗಿದ್ದು, ಇದು ಮಹಾ ಕಾವ್ಯವಾಗಿ ಬೆಳಗಬೇಕು, ಕನ್ನಡ ನಮ್ಮ ಶೃತಿಯಾಗಬೇಕು, ಅಭಿವೃದ್ಧಿ ನಮ್ಮ ಕೃತಿಯಾಗಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಹಬ್ಬದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ.ಕನ್ನಡದ ಭಾಷೆಗೆ ಮಿತಿ ಇದೆ. ಆದರೆ, ಭಾವಕ್ಕೆ ಮಿತಿ ಎಲ್ಲಿದೆ? ನಮ್ಮಗೆ ದೆಹಲಿ ಬೇಕು, ದೆಹಲಿಗೂ ನಾವು ಬೇಕು. ಆದರೆ, ದೆಹಲಿಗೆ ಕನ್ನಡವೇ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಮೆರೆಸಬೇಕಾಗಿದೆ. ರಾಜ್ಯದ ಶಾಂತಿ, ಸಮೃದ್ಧಿ ಕನ್ನಡಿಗರ ಮಂತ್ರವಾಗಬೇಕು. ರಾಜ್ಯದಲ್ಲಿ ವಾಸಿಸುವವರೆಲ್ಲರೂ ಕನ್ನಡಿಗರು. ಇವರಲ್ಲಿ ಯಾರಿಗೆ ಕನ್ನಡ ಮಾತಡಲು ಬರುವುದಿಲ್ಲ. ಯಾರಿಗೆ ಅರ್ಥವಾಗುವುದಿಲ್ಲ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಕಾರ್ಪೋರೇಟರ್ ಸಂಸ್ಥೆಯೇ ಸಮೀಕ್ಷೆ ಮಾಡುತ್ತದೆ ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದರು.
ಪ್ರತಿಭೆ ಮತ್ತು ಉದ್ಯಮ ಅಗತ್ಯವಾಗಿದ್ದು, ಹುಬ್ಬಳ್ಳಿ-ಬೆಳಗಾವಿ, ಮಂಗಳೂರು-ಮೈಸೂರು ಜೋಡಿಯಾಗಬೇಕು. ಈ ಎರಡೂ ಜಿಲ್ಲೆಗಳಲ್ಲಿ ವ್ಯಾಪಾರ ಸಾಂಪ್ರಾದಾಯಿಕ ವೈಭವವಿದೆ. ನಮ್ಮ ಜಿಲ್ಲೆಗಳ ನಡುವೆಯೇ ಜೋಡಿಯಾಗಬೇಕು. ೨೯ ಜಿಲ್ಲೆಗಳನ್ನು ಎರೆಡೆರೆಡು ಜಿಲ್ಲೆಗಳಾಗಿ ಜೋಡಿಸಿ ವ್ಯಾಪಾರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದರು.
ಕೃಷಿಕ-ಕಾರ್ಪೋರೇಟ್ ಜೋಡಿಯಾಗಿ ಅವರ ಕಷ್ಟ ಇವರಿಗೆ, ಇವರ ಕಷ್ಟ ಅವರಿಗೆ ಗೊತ್ತಾಗಬೇಕು. ಕನ್ನಡದ ಪಟ್ಟದ ಕೆಲಸಕ್ಕೆ ತಾವು ಎಲ್ಲ ಸಮಯ ಮೀಸಲಿಟ್ಟು ಸಕ್ರಿಯವಾಗಿ ಭಾಗವಹಿಸುತ್ತೇನೆ ಎಂದು ಹಂಸಲೇಖ ಭರವಸೆ ನೀಡಿದರು.
ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣ, ದೇಶದ ಹಾಗೂ ಜಗತ್ತಿನ ಜತೆ ಕನ್ನಡವನ್ನು ಸಮೀಕರಿಸಿ ಕನ್ನಡ ಅಭಿವೃದ್ಧಿ ಮಾಡೋಣ ಎಂದ ಅವರು, ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.


ಸಾವಿರ ಮೆಟ್ಟಿಲು ಹತ್ತಿ ಬಂದೆ
ಕರ್ನಾಟಕದ ಏಕೀಕರಣವಾಗಿ ೫೦ ವರ್ಷ ಪೂರ್ಣಗೊಂಡಿದೆ. ತಮ್ಮ ಕಲಾ ಸೇವೆಗೂ ೫೦ ವರ್ಷ ತುಂಬಿದೆ, ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಅತ್ಯಂತ ಬೆಲೆಯುಳ್ಳದ್ದು, ಈ ಅವಕಾಶಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ದಸರಾ ಉದ್ಘಾಟನೆ ಮಾಡುವ ಅವಕಾಶಕ್ಕೆ ಹಲವರು ಕಾರಣರಾಗಿದ್ದಾರೆ. ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮ, ಕನ್ನಡಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೀಗೆ ಹಲವು ಭೀಮ ಪಡೆಯೇ ಇದ್ದಾರೆ. ತಾವು ಈ ಸಂದರ್ಭದಲ್ಲಿ ಯಾರನ್ನು ನೆನೆಯಲಿ ಹೇಳಿ? ಭೂಮಿ ತಾಯಿಯ ನೆನೆದು ಬಿಟ್ಟರೆ ಇವರನ್ನೆಲ್ಲ ನೆನೆದಂತೆ ಎಂದು ಹೇಳಿದರು.