ಶೂ ಹಣ ಹಿಂತಿರುಗಿಸುವ ನೆಪದಲ್ಲಿ ಭಾರೀ ವಂಚನೆ


ಉಡುಪಿ, ಜು.೧೬- ಶೂ ಹಣವನ್ನು ಹಿಂದಿರುಗಿಸುವ ನೆಪದಲ್ಲಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಪಡೆದು ಗ್ರಾಹಕನ ಬ್ಯಾಂಕ್ ಖಾತೆಯಿಂದ ಒಟ್ಟು 39,061 ರೂ.ಗಳನ್ನು ಆನ್‌ಲೈನ್ ಮೂಲಕ ಲಪಟಾಯಿಸಿರುವ ಘಟನೆಯೊಂದು ವರದಿಯಾಗಿದೆ.
ವಸಂತ ಶೆಟ್ಟಿ ಎಂಬವರು ಬ್ರಹ್ಮಾವರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಅದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಅವರು ಜು.13ರಂದು ಹೊಸದಾಗಿ ಖರೀದಿಸಿದ ಶೂ ನ್ನು ಹಿಂದಿರುಗಿಸುವ ಬಗ್ಗೆ ಕರೆ ಮಾಡಿದಾಗ, ಶೂ ಹಣ ಹಿಂದಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಒದಗಿಸುವಂತೆ ಸೂಚಿಸಲಾಯಿತು. ಅದರಂತೆ ವಸಂತ ಶೆಟ್ಟಿ ಅವರು ಕ್ರೆಡಿಟ್ ಕಾರ್ಡಿನ ವಿವರ ಒದಗಿದ್ದು, ಬಳಿಕ  ಅವರ ಕ್ರೆಡಿಟ್ ಕಾರ್ಡ್‌ನಿಂದ ಅದೇ ದಿನ ಕ್ರಮವಾಗಿ 20,290 ರೂ., 15,217ರೂ. ಹಾಗೂ 3,554 ರೂ. ಸೇರಿದಂತೆ ಒಟ್ಟು 39,061 ರೂ. ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ಇವರ ಗಮನಕ್ಕೆ ಬಾರದಂತೆ ಅನಧಿಕೃತ ವಾಗಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದರು. ಮೋಸ ಹೋಗಿರುವ ವಸಂತ ಶೆಟ್ಟಿ ಅವರು ಈಗ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.