ಶೂನ್ಯ ಬಡ್ಡಿದರದ ಸಾಲ ಮೀತಿ 10 ಲಕ್ಷಕ್ಕೆ ಹೆಚ್ಚಿಸಲು ಡಾ.ಜೆ.ಆರ್.ಷಣ್ಮುಖಪ್ಪ ಒತ್ತಾಯ

ದಾವಣಗೆರೆ.ನ.21; ಸಹಕಾರ ಸಂಘಗಳ ಮೂಲ ಕೃಷಿಕರಿಗೆ ನೀಡುವ ಶೂನ್ಯ ಬಡ್ಡಿದರದ ಸಾಲದ ಪ್ರಮಾಣವನ್ನು ಕನಿಷ್ಟ 10 ಲಕ್ಷ ರೂಗೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಡಾ.ಜೆ.ಆರ್.ಷಣ್ಮುಖಪ್ಪ ಆಗ್ರಹಿಸಿದರು.ತಾಲ್ಲೂಕಿನ ಐಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ 4 ನೇ ದಿನದ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಸಂಬAಧಿತ ವೆಚ್ಚಗಳು ದಿನೇ ದಿನೇ ಹೆಚ್ಚುತ್ತಿವೆ. ಮತ್ತೊಂದೆಡೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಇಲ್ಲದೇ ರೈತರು ಕೃಷಿ ಕಾಯಕ ಮಾಡುವುದನ್ನೇ ಬಿಡುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಇದೀಗ ಸರ್ಕಾರ ನೀಡುತ್ತಿರುವ 3 ಲಕ್ಷ ರೂ ವರೆÀಗಿನ ಶೂನ್ಯ ಬಡ್ಡಿ ರಹಿತ ಸಾಲದ ಪ್ರಮಾಣವನ್ನು 10 ಲಕ್ಷ ರೂಗೆ ಹೆಚ್ಚಳ ಮಾಡಬೇಕು ಮತ್ತು ಮಧ್ಯಮಾವಧಿ ಸಾಲದ ಪ್ರಮಾಣವನ್ನು 10 ರಿಂದ 25 ಲಕ್ಷ ರೂಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಲ್ಲಿನ ಪ್ರಾದೇಶಿಕ ಬೆಳೆಗಳಿಗೆ ತಕ್ಕಂತೆ ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ. ಇದೇ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೇಜೋಳ, ಅಡಿಕೆ ಸೇರಿದಂತೆ ಇತರೆ ಬೆಳೆಗಳಿಗೂ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿದರೆ ರೈತರ ಅಭಿವೃದ್ಧಿ ಮಾಡಿದ ಕೀರ್ತಿ ಸರ್ಕಾರಗಳಿಗೆ ಬರುತ್ತದೆ. ಸಹಕಾರ ರಂಗದ ಮೂಲಕ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವುದು ಸಹಕಾರ ತತ್ವದ ಮೂಲ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಹಕಾರ ಸಂಘಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಿದರೆ ಸಹಕಾರಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಆಶಿಸಿದರು.