ಶೂನ್ಯ ಪ್ರಯಾಣ ಟಿಕೆಟ್, ನಾರಿಯರ ಕನಸಿಗೆ ಸರ್ಕಾರದ ಶಕ್ತಿ

ಕೋಲಾರ, ಆ,೩೦-ಮಹಾತ್ಮಾ ಗಾಂಧಿಯವರು ಮಹಿಳಾ ಸ್ವಾತಂತ್ರ್ಯಕ್ಕೆ ಅನನ್ಯವಾದ ಪ್ರಾಶಸ್ತ್ಯ ನೀಡಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ.
ಮಹಿಳೆ ಕಟ್ಟುಪಾಡುಗಳನ್ನು ಮೀರಿ ಹೊರ ಬರುತ್ತಿದ್ದಾಳೆ. ಕುಟುಂಬವನ್ನು ಮುನ್ನಡೆಸುವ ಈಕೆ, ಸಮಾಜದಲ್ಲಿ ನಿರ್ಭೀತಿಯಿಂದ ಹೆಜ್ಜೆ ಇಡಲು ಟೊಂಕ ಕಟ್ಟಿ ನಿಂತಿದ್ದಾಳೆ. ಇದೆಲ್ಲ ಸಾಧ್ಯವಾಗುತ್ತಿರುವುದು ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಗಳಿಂದ ಶಕ್ತಿ ಯೋಜನೆ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಜೂನ್ ೧೧ ರಂದು ಜಾರಿಗೆ ಬಂದ ಶಕ್ತಿ ಯೋಜನೆಯಿಂದ ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿದಂತಾಗಿದೆ.
ಸರ್ಕಾರದ ಶಕ್ತಿ ಯೋಜನೆಗೆ ಅಭೂತಪೂರ್ವವಾದ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸ್ಪಂದನೆ ದೊರಕಿದೆ. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಮನೆಯಿಂದ ಹೊರಬರದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದ್ದು, ದೇವಾಲಯಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಪ್ರಯಾಣ ವೆಚ್ಚದ ಉಳಿತಾಯದಿಂದ ಮಹಿಳೆಯರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಿದ್ದು, ಹೆಚ್ಚಿನ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.