ಶೂನ್ಯ ನೆರಳಿನ ವಿದ್ಯಾಮಾನಕ್ಕೆ ಸಾಕ್ಷಿಯಾದ ಬಳ್ಳಾರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ

ಬಳ್ಳಾರಿ, ಮೇ.02: ವರ್ಷದಲ್ಲಿ ಎರಡು ಬಾರಿ ಜರುಗುವ ಬಲು ಅಪರೂಪದ ಖಗೋಳ ವಿದ್ಯಾಮಾನವೊಂದಕ್ಕೆ ಶನಿವಾರದಂದು ಬಳ್ಳಾರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಸಾಕ್ಷಿಯಾಯಿತು. ಶೂನ್ಯ ನೆರಳು ಎಂದು ಕರೆಯಲ್ಪಡುವ ಈ ವಿದ್ಯಾಮಾನವು ನಗರದಲ್ಲಿ ಅಪರಾಹ್ನ 12:19 ಕ್ಕೆ ಜರುಗಿತು.
ಕೆಲವು ನಿಮಿಶಗಳವರೆಗೆ ನಡೆಯುವ ಈ ವಿದ್ಯಾಮಾನದ ಸಂದರ್ಭದಲ್ಲಿ ನೆತ್ತಿ ಸುಡುವ ಬಿಸಿಲಿದ್ದರು ಸಹಿತ ಆ ಸಮಯದಲ್ಲಿ ನಮ್ಮ ನೆರಳು ನಮಗೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ ಬೆಳಗಿನಿಂದ ಮದ್ಯಾಹ್ನವಾಗುತ್ತಲೆ ನೆರಳಿನ ಉದ್ದ ಕಡಿಮೆಯಾಗುತ್ತ, ಸಂಜೆಯಾದಂತೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ಶೂನ್ಯ ನೆರಳಿನ ದಿನದಂದು ಅಪರಾಹ್ನ ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸುವುದಿಲ್ಲ ಎಂದು ವಿಜ್ಞಾನ ಕೇಂದ್ರದ ಕ್ಯೂರೇಟರ್ ಜಿ.ವಿ.ಶಿವರಾಜ್ ರವರು ತಿಳಿಸಿದರು.
ಇದೇ ವಿದ್ಯಾಮಾನವು ಮತ್ತೆ ಬಳ್ಳಾರಿಯಲ್ಲಿ ಆಗಷ್ಟ 11 ರಂದು ಮರುಕಳಿಸುವುದು, ಅಂದು ಅಪರಾಹ್ನ 12:28 ಕ್ಕೆ ಜರುಗುವ ಇದನ್ನು ಬಳ್ಳಾರಿಗರು ವಿಕ್ಷಿಸಬಹುದು, ಸಾಮಾನ್ಯವಾಗಿ ಶೂನ್ಯದಿನದಂದು ವಿದ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ವಿಜ್ಞಾನ ಕೇಂದ್ರದಲ್ಲಿ ವಿವಿದ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿ ಶೂನ್ಯ ನೆರಳಿನ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ನಿಯಂತ್ರಣ ಕ್ರಮವಾಗಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಇರಲಿಲ್ಲ ಆದ್ದರಿಂದ ವಿಜ್ಞಾನ ಕೇಂದ್ರದ ಕ್ಯೂರೇಟರ್ ಹಾಗು ಎಲ್ಲಾ ಸಿಬ್ಬಂದಿಗಳು ಈ ಕೌತುಕವನ್ನು ವೀಕ್ಷಿಸಿದರು.