ಶೂನ್ಯ ಕೊರೊನಾ, ಆತಂಕ ಅಂತ್ಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೨೪- ಇಡೀ ಜಗತ್ತನ್ನು ತಲ್ಲಣಗೊಳಿಸಿ ಜನಜೀವನವನ್ನು ನರಕ ಸದೃಶಗೊಳಿಸಿದ್ದ ಮಹಾಮಾರಿ ಕೊರೊನಾ ಆರ್ಭಟಕ್ಕೆ ರಾಜ್ಯದಲ್ಲಿ ತೆರೆ ಬಿದ್ದಂತಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯವಾಗುತ್ತಿದ್ದು, ನಿನ್ನೆ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ.
ಕೆಲ ತಿಂಗಳುಗಳಿಂದಲೇ ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾಗಿತ್ತಾದರೂ ಅಲ್ಲೊಂದು, ಇಲ್ಲೊಂದು ಎಂಬಂತೆ ಪ್ರತಿದಿನ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿತ್ತು. ನಿನ್ನೆ ಒಂದು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಹಾಗಾಗಿ ಕೊರೊನಾ ಶೂನ್ಯಕ್ಕೆ ಬಂದಂತಾಗಿದೆ.
ರಾಜ್ಯದಲ್ಲಿ ಸದ್ಯ ಕೇವಲ ೯ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ದೈನಂದಿನ ಪರೀಕ್ಷಾ ಪಾಸಿಟಿವ್ ದರ ೦.೧೪ ರಷ್ಟಿತ್ತು. ಈಗ ಪಾಸಿಟಿಲ್ ಶೂನ್ಯಕ್ಕೆ ಬಂದಿದೆ.
ಕಳೆದ ೨೪ ಗಂಟೆಗಳಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿಲ್ಲ. ಹಾಗೆಯೇ ಕೊರೊನಾ ಸೋಂಕಿಗೆ ಒಳಗಾಗಿದ್ದವರಲ್ಲಿ ನಾಲ್ವರು ಚೇತರಿಸಿಕೊಂಡಿದ್ದಾರೆ.
ಜೂನ್‌ನಲ್ಲಿ ದಿನಕ್ಕೆ ೧ ರಿಂದ ೨೫ ಸೋಂಕು ಪ್ರಕರಣಗಳು ದೃಢಪಡುತ್ತಿದ್ದವು. ಜುಲೈನಲ್ಲಿ ಪ್ರಕರಣಗಳು ಇಳಿಕೆಯಾಗಿದ್ದು, ಜುಲೈ ೨೩ ರಂದು ಒಂದೂ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ.ರಾಜ್ಯದಲ್ಲಿ ಕೇವಲ ೯ ಸಕ್ರಿಯ ಪ್ರಕರಣಗಳಷ್ಟೇ ಇದ್ದು, ಈ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕಿತರು ಕೂಡಾ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.ಕೊರೊನಾ ಸೋಂಕನ್ನು ಬಹುತೇಕ ಮರೆತು ಹೋಗಿದ್ದಾರಾದರೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇದ್ದವು. ಈಗ ರಾಜ್ಯದಲ್ಲಂತೂ ಶೂನ್ಯ ಪ್ರಕರಣ ದಾಖಲಾಗಿದ್ದು, ಕೊರೊನಾ ಸೋಂಕಿನ ಅಂತ್ಯವಾದಂತಿದೆ.
ಇಡೀ ಜಗತ್ತನ್ನೇ ಅಲುಗಾಡಿಸಿದ್ದ ಕೊರೊನಾ
ಕೊರೊನಾ ಸೋಂಕು ಮೊದಲಿಗೆ ಚೀನಾದ ವೂಹಾನ್ ನಗರದಲ್ಲಿ ಡಿಸೆಂಬರ್ ೨೦೧೯ ರಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕಾಯಿಲೆ ಎಂದು ಗುರುತಿಸಿ ಮಾರ್ಚ್ ೧೧ ೨೦೨೨ ರಂದು ಸಾಂಕ್ರಾಮಿಕ ಎಂದು ಘೋಷಣೆಯನ್ನು ಮಾಡಿತ್ತು.ಈ ಕೊರೊನಾ ಭಾರತಕ್ಕೆ ೨೦೨೦ ರಲ್ಲಿ ಕಾಲಿಟ್ಟು, ಕೇರಳ ರಾಜ್ಯದಲ್ಲಿ ಮೊದಲ ಬಾರಿಗೆ ಸೋಂಕು ವ್ಯಕ್ತಿಯೊಬ್ಬರಿಗೆ ದೃಢಪಟ್ಟಿತ್ತು. ನಂತರ ರಾಜ್ಯದ ಕಲ್ಬುರ್ಗಿ ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಸಾವು ಸಂಭವಿಸಿ ದೇಶದಲ್ಲಿ ಕೊರೊನಾಕ್ಕೆ ಬಲಿಯಾದ ಪ್ರಕರಣ ಇದಾಗಿತ್ತು.ಹೀಗೆ ದಿನೇ ದಿನೇ ಕೊರೊನಾ ಎಲ್ಲೆಡೆ ವ್ಯಾಪಿಸಿ ಬಡವರು, ಶ್ರೀಮಂತರು ಎನ್ನದೆ ಹಲವರಲ್ಲಿ ಸೋಂಕು ಕಾಣಿಸಿಕೊಂಡು ಕೆಲವರ ಪ್ರಾಣವನ್ನು ತೆಗೆದಿತ್ತು.
ಕೆಲ ಕುಟುಂಬದಲ್ಲಿ ತಂದೆ-ತಾಯಿಗಳು ಮೃತಪಟ್ಟು, ಮಕ್ಕಳು ಅನಾಥರಾಗುವಷ್ಟರ ಮಟ್ಟಿಗೆ ಕೊರೊನಾ ಸೋಂಕಿನ ತೀವ್ರತೆ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವುದಕ್ಕೂ ಸಮಸ್ಯೆಗಳು ಉಂಟಾಗಿದ್ದವು.ಜತೆಗೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಷ್ಟರ ಮಟ್ಟಿಗೆ ಸಮಸ್ಯೆ ಉಂಟಾಗಿತ್ತು.
ಕೊರೊನಾ ಲಸಿಕೆ ಬಂದ ನಂತರ ದೇಶದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಂತಾಯಿತು. ಕೊರೊನಾ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗುತ್ತಿದ್ದಂತೆ ಜನ ಮಾಸ್ಕ್ ಧರಿಸುವುದನ್ನು ಬಿಟ್ಟು ಕೊರೊನಾ ಪೂರ್ವದ ಜೀವನದ ಸ್ಥಿತಿ ಮರಳಿದ್ದರು.ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿತ್ತು. ಈಗ ಕೊರೊನಾ ಶೂನ್ಯಕ್ಕೆ ಬಂದಂತಾಗಿದೆ.