ಶೂನ್ಯಾವಸ್ಥೆಯ ಬಿಜೆಪಿಯಿಂದ ನಾನು ಗೆಲ್ಲಲು ಕಾರಣ ಅಶೋಕ್ ಗಸ್ತಿ – ಪಾಪಾರೆಡ್ಡಿ

ಅಶೋಕ ಗಸ್ತಿ ಫೌಂಡೇಷನ್ : ಊರುಗೋಲು ವಿತರಣಾ ಕಾರ್ಯಕ್ರಮ
ರಾಯಚೂರು.ಜು.೨೨- ಅಖಂಡ ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಶೂನ್ಯಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ ಪ್ರಪ್ರಥಮ ಬಾರಿಗೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಪಕ್ಷದ ಖಾತೆ ಆರಂಭಿಸುವಂತೆ ಮಾಡಿದ ಕೀರ್ತಿ ದಿ.ಅಶೋಕ್ ಗಸ್ತಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಭಾವುಕತೆಯಿಂದ ಹೇಳಿದರು.
ಅವರಿಂದು ನಗರದ ಎಪಿಎಂಸಿ ಸಭಾಂಗಣದಲ್ಲಿ ಅಶೋಕ ಗಸ್ತಿ ಫೌಂಡೇಶನ್ ಹಮ್ಮಿಕೊಂಡಿದ್ದ ಉದ್ಘಾಟನೆ ಸಮಾರಂಭ ಹಾಗೂ ವಯೋವೃದ್ಧರಿಗೆ ಊರುಗೋಲು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಸಿ, ಸಂಘ ಪರಿವಾರ ಮತ್ತು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ನಿರತರಾಗಿ, ಅಧಿಕಾರದ ಆಸೆ ಪಡದೆ, ಪಕ್ಷವನ್ನು ಬಲಿಷ್ಠಗೊಳಿಸುವ ಕನಸಿನೊಂದಿಗೆ ಇಂದು ಪಕ್ಷ ಜಿಲ್ಲೆಯಲ್ಲಿ ಅತ್ಯಂತ ಸಮರ್ಥವಾಗಿ ಬೆಳೆಯಲು ಅವರು ಕಾರಣ.
೧೯೯೪ ರಲ್ಲಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡೆ. ಎನ್.ಶಂಕ್ರಪ್ಪ ಹಾಗೂ ರಂಗನಾಥ ರೆಡ್ಡಿ ಅವರು ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡರು. ಅಂದು ನನ್ನ ಜೊತೆ ಹೆಗಲಿ ಹೆಗಲುಕೊಟ್ಟು ನಿಂತು ೧೯೯೪ ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ೧೯ ಸಾವಿರ ಮತ ಪಡೆದು ಪರಾಭವಗೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ವಿಷಯಕ್ಕೆ ಸಂಬಂಧಿಸಿ ನಾನು ಚಿಂತೆಯಲ್ಲಿದ್ದಾಗ ನನಗೆ ಧೈರ್ಯ ತುಂಬಿದ ಅಶೋಕ ಗಸ್ತಿ ನನ್ನ ಬೆನೆಲುಬಾಗಿ ನಿಂತಿದ್ದರು. ಅಶೋಕ್ ಗಸ್ತಿ ಅವರ ನೆರವುನಿಂದ ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ೩೦ ಸಾವಿರ ಮತಗಳಿಂದ ಗೆದ್ದು ನಾನು ಶಾಸಕನಾದೆ. ಈ ಗೆಲುವಿನ ಸಂಪೂರ್ಣ ಶ್ರೇಯಸ್ಸು ದಿ.ಅಶೋಕ್ ಗಸ್ತಿ ಅವರಿಗೆ ಸಲ್ಲುತ್ತದೆ.
ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿ ಪಕ್ಷವನ್ನು ಬಲಿಷ್ಠಗೊಳಿಸಿ ಪಕ್ಷಕ್ಕೆ ಮಾಡಿದ ತ್ಯಾಗ ಬಲಿದಾನದಿಂದಲೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಿನವಾಗಿದೆ. ಆದರೆ, ಇಂದು ಅಶೋಕ ಗಸ್ತಿ ಅವರು ನಮ್ಮೊಂದಿಗಿಲ್ಲ ಎನ್ನುವ ತೀವ್ರವಾದ ನೋವಿನಲ್ಲೂ ಅವರ ಸಂಘಟನಾ ಶಕ್ತಿಯನ್ನು ನಾವು ಮುನ್ನಡೆಸಬೇಕಾಗಿದೆ. ಅವರ ಧರ್ಮಪತ್ನಿ ಸುಮಾ ಅಶೋಕ ಗಸ್ತಿ ಅವರು ಅತ್ಯುತ್ತಮ ಕಾರ್ಯ ಕೈಗೊಂಡಿದ್ದಾರೆ. ಇವರ ಈ ಫೌಂಡೇಷನ್ ಭಾಗವಾಗಿ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವ ಭರವಸೆಯನ್ನು ಅವರು ನೀಡಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವ ಸಂಘ ಹಿರಿಯ ನಾಯಕ ಸುಧೀರ್ ದೇಶಪಾಂಡೆ ಅವರು ಮಾತನಾಡಿ, ಅಶೋಕ್ ಗಸ್ತಿ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆ ಮತ್ತು ಸಮಾಜದ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡಿದ್ದಾರೆ. ಅವರ ಜೀವನ ಸಾಧನೆ ಮೂಲಕ ಕಾರ್ಯಕ್ರಮ ಹಮ್ಮಿಕೊಂಡ್ಡಿರುವುದು ಶ್ಲಾಘನೀಯ ಎಂದರು. ಸಂಘ ಪರಿಹಾರ ಹಾಗೂ ಬಿಜೆಪಿ ಪಕ್ಷದಲ್ಲಿ ಸಮನ್ವಯವಾಗಿ ಅತ್ಯಂತ ವಿಚಾರಧಾರೆಯಾಗಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದರು ಎಂದರು.
ಈ ವೇಳೆ ಸುಮಾ ಅಶೋಕ್ ಗಸ್ತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರದ್ದೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳನ್ನು ಮುಂದುವರೆಸುತ್ತಾ, ಸಾಮಾಜಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಅವರ ಉದ್ದೇಶಗಳನ್ನು ಮುಂದುವರೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಚುತ್ಯರೆಡ್ಡಿ, ಉಪಾಧ್ಯಕ್ಷ ಬಂಗಿ ನರಸರೆಡ್ಡಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಇದ್ದರು.