ಶೂನ್ಯತೆ,ಕತ್ತಲೆ ಎಂಬ ಭಾವದಲ್ಲಿ ವಿಜಯಪುರ ಜಿಲ್ಲೆಯ ಜನತೆ : ಬಿ.ಆರ್.ಬನಸೋಡೆ

ವಿಜಯಪುರ :ಜ.7: ಶೀಗಳ ಪಾಂಡಿತ್ಯಕ್ಕೆ ಮಾರುಹೋಗದವರಿಲ್ಲ. ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದರು ಪೂಜ್ಯ ಸಿದ್ಧೇಶ್ವರ ಶ್ರೀಗಳು. ಅವರ ಅಗಲಿಕೆಯಿಂದ ನಮ್ಮ ನಾಡು ಹಾಗೂ ಬಹುಮುಖ್ಯವಾಗಿ ವಿಜಯಪುರ ಜಿಲ್ಲೆಯ ಸಿರಿವಂತಿಕೆ, ಗುರುತು, ಕೀರ್ತಿ, ಭಂಡಾರ ಎಲ್ಲವನ್ನೂ ಕಳೆದುಕೊಂಡಿದೆ. ಒಂದು ರೀತಿಯ ಕತ್ತಲು, ಶೂನ್ಯತೆ ಆವರಿಸಿದೆ. ಮತ್ತೆ ಜ್ಞಾನದ ಬೆಳಕು ಮೂಡಲು ಹೊಸದಾಗಿ ಸೂರ್ಯೋದಯವಾಗಬೇಕಿದೆ ಎಂದು ಅನಿಸುತ್ತಿದೆ ಎಂದು ಓದುಗರ ಚಾವಡಿ ಅಧ್ಯಕ್ಷ ಬಿ.ಆರ್.ಬನಸೋಡೆ ಅಭಿಪ್ರಾಯಪಟ್ಟರು.

ಅವರು ಗುರುವಾರ ಸಂಜೆ ನಗರದ ಸ್ಟೇಷನ್ ರಸ್ತೆಯ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಜಿಲ್ಲಾ ಯುವ ಪರಿಷತ್ತು ಹಾಗೂ ಓದುಗರ ಚಾವಡಿ ಆಶ್ರಯದಲ್ಲಿ ಹಮ್ಮಿಕೊಂಡ ” ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೊಂದು ನುಡಿಪೂಜೆ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಹಿತಿ ಸುಭಾಸ ಯಾದವಾಡ ಮಾತಾಡಿ, ಶ್ರೀಗಳ ಅಮೃತವಾಣಿಯಿಂದ ಪ್ರೇರೇಪಿತಗೊಂಡ ಯತಿಮೂರ್ತಿಗಳು, ಶುದ್ಧಗೊಂಡ ಮನಸ್ಸುಗಳು, ಸನ್ಮಾರ್ಗದತ್ತ ಸಾಗಿದ, ಸಾಗುತ್ತಿರುವವರ ಸಂಖ್ಯೆ ಅಷ್ಟು ಸುಲಭಕ್ಕೆ ಸಿಗದು. ನಿಜಾರ್ಥದಲ್ಲಿ ಅವರೊಬ್ಬ ಅದ್ಭುತ ಸಮಾಜ ಶಿಕ್ಷಕರಾಗಿ ನಮ್ಮೆಲ್ಲರ ಬದುಕನ್ನು ಹಸನು ಮಾಡಿ ಹೋಗಿದ್ದಾರೆ ಎಂದು ನುಡಿದರು.

ಹಿಂದಿ ಉಪನ್ಯಾಸಕ, ಚಾವಡಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಬಿರಾದಾರ್ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀಗಳ ಪರಿಚಯವಿರುವ ನನಗೆ ಈ ಅವಧಿಯಲ್ಲಿ ಒಂದಾರು ವರ್ಷಗಳ ಕಾಲ ವಿವಿಧ ದಿನಪತ್ರಿಕೆಗಳಿಗೆ ಅವರ ಪ್ರವಚನವನ್ನು ತಿಂಗಳುಗಳ ಕಾಲ ಸಾರ ಬರೆಯುವ ಅವಕಾಶ ದೊರೆತದ್ದೇ ನನ್ನ ಜೀವನದ ಅತಿದೊಡ್ಡ ಸೌಭಾಗ್ಯವಾಗಿದೆ. ಅಷ್ಟೇ ಅಲ್ಲದೇ ನಾವು ಆಯೋಜಿಸಿದ ಅನೇಕ ಕಾರ್ಯಕ್ರಮಗಳಿಗೆ ಶ್ರೀಗಳ ಸಾನ್ನಿಧ್ಯ ದೊರೆತಿದ್ದು ಆ ಕ್ಷಣ ನಮ್ಮ ಬಳಗವನ್ನು ಹುರಿದುಂಬಿಸಿದ್ದು ನಮ್ಮೆಲ್ಲರ ಸುಕೃತ. ಅಂದಂದಿನ ಅವರ ಆಶೀರ್ವಾಣಿಯನ್ನು ಕೇವಲ ನೆನೆಯದೇ ಅವುಗಳನ್ನು ನಿತ್ಯ ಜೀವನದಲ್ಲಿ ಕಾರ್ಯರೂಪಕ್ಕೆ ತರಲು ಯತ್ನಿಸುತ್ತೇವೆ ಎಂದು ನುಡಿದರು.

ಸಾಹಿತಿ ಮನು ಪತ್ತಾರ ಮಾತನಾಡಿ, ಹುಟ್ಟುವ ಮುನ್ನವೇ ಸಾವು ಆವರಿಸಿರುತ್ತದೆ. ಸಾವನ್ನು ಯಾರೂ ಗೆದ್ದಿಲ್ಲ. ಯಾವ ಮಹಾತ್ಮರನ್ನೂ ಸಾವು ಬಿಟ್ಟಿಲ್ಲ. ಆದರೆ ಸಾವಿನ ನಂತರವೂ ಮನುಷ್ಯನು ಬದುಕುವುದಿದೆಯಲ್ಲ. ಅದು ಬಹಳ ಮಹತ್ವದ್ದು. ಮನುಷ್ಯ ಏನೆಲ್ಲಾ ಸಂಶೋಧಿಸಿದರೂ ಸಾವನ್ನು ಮಾತ್ರ ಇದುವರೆಗೂ ಆತನಿಗೆ ಕಂಡುಹಿಡಿಯಲಾಗಿಲ್ಲ. ಮರಣವೆಂದರೆ ವಿಶ್ರಾಂತಿ. ಅದುವೇ ಶಾಂತಿ, ಪರಮಶಾಂತಿ. ಸಾವು ಬೇಕು, ಸಾವಿನ ಬಗ್ಗೆ ಮನುಷ್ಯ ಚಿಂತಿಸಬೇಕು. ಸಾವಲ್ಲಿ ಯಾರೂ ಅನುತ್ತೀರ್ಣರಿಲ್ಲ.ಅಲ್ಲಿ ಪ್ರತಿಯೊಬ್ಬರೂ ಉತ್ತೀರ್ಣರೇ ಎಂದು ನುಡಿದರು.

ಪೆÇ್ರೀ.ಯು.ಎನ್.ಕುಂಟೋಜಿ, ಶರಣಗೌಡ ಪಾಟೀಲ, ಮಂಜುನಾಥ ಜುನಗೊಂಡ, ದಾಕ್ಷಾಯಣಿ ಬಿರಾದಾರ್ ಮಾತನಾಡಿದರು. ಸುಭಾಸಚಂದ್ರ ಕನ್ನೂರ, ರಾಘವೇಂದ್ರ ಗೋಡಿ, ಆಕಾಶ ಸಬರದ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಪಾಟೀಲ ನಿರೂಪಿಸಿದರು. ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಸ್ವಾಗತಿಸಿಸಿದರು. ಮಯೂರ ತಿಳಗುಳಕರ ವಂದಿಸಿದರು.