ವರ್ಜೀನಿಯಾ (ಅಮೆರಿಕಾ), ಜೂ.೭- ಇತ್ತೀಚಿಗಷ್ಟೇ ಪ್ರೌಢಶಾಲೆಯ ಪದವಿ ಸಮಾರಂಭ ನಡೆದಿದ್ದ ಇಲ್ಲಿನ ರಿಚ್‌ಮಂಡ್‌ನ ಥಿಯೇಟರ್ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಐವರು ನಾಗರಿಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ೧೯ರ ಹರೆಯದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯಲ್ಲಿ ೧೮ ಹಾಗೂ ೩೬ರ ಹರೆಯದ ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎಂದು ಮಧ್ಯಂತರ ರಿಚ್ಮಂಡ್ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವರ್ಜೀನಿಯಾ ರಾಜಧಾನಿಯ ಆಲ್ಟ್ರಿಯಾ ಥಿಯೇಟರ್‌ನ ಹೊರಗೆ ಮತ್ತು ಪಕ್ಕದ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಿಂದ ಐವರು ಗಾಯಗೊಂಡರು. ಇನ್ನು ಪೊಲೀಸರ ಪ್ರಕಾರ ಕನಿಷ್ಠ ೧೨ ಮಂದಿ ಗಾಯಗೊಂಡಿದ್ದು, ಇದರಲ್ಲಿ ಆತಂಕದಿಂದ ಚಿಕಿತ್ಸೆ ಪಡೆದುಕೊಂಡವರು ಕೂಡ ಸೇರಿದ್ದಾರೆ. ಇನ್ನು ಘಟನಾ ಸ್ಥಳದಿಂದ ಪೊಲೀಸರು ಹಲವು ಪ್ರಕಾರದ ಗನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.