ಶೂಟೌಟ್: ಅಪರಾಧಿಗೆ ಜೀವಾವಧಿ ಶಿಕ್ಷೆ

ನ್ಯೂಯಾರ್ಕ್, ಜೂ.೨೭- ಕಳೆದ ವರ್ಷ ಕೊಲೊರಾಡೋದ ಎಲ್‌ಜಿಬಿಟಿ ನೈಟ್‌ಕ್ಲಬ್‌ನಲ್ಲಿ ಐದು ಜನರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ದಾಳಿಕೋರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಆರೋಪಿಯ ಮೇಲಿನ ಪ್ರಕರಣ ಸಾಬೀತಾದ ಹಾಗೂ ಅಪರಾಧವನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ.
ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿಯನ್ನು ಆಂಡರ್ಸನ್ ಲೀ ಆಲ್ಡ್ರಿಚ್ (೨೩) ಎಂದು ಗುರುತಿಸಲಾಗಿದೆ. ನವೆಂಬರ್ ೧೯ರ ೨೦೨೨ ರಂದು ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿರುವ ಕ್ಲಬ್ ಕ್ಯೂನಲ್ಲಿ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಡೇನಿಯಲ್ ಆಸ್ಟನ್ (೨೮), ಡೆರಿಕ್ ರಂಪ್ (೩೮), ಕೆಲ್ಲಿ ಲವಿಂಗ್ (೪೦), ಆಶ್ಲೇ ಪಾಗ್ (೩೪) ಮತ್ತು, ರೇಮಂಡ್ ವ್ಯಾನ್ಸ್ (೨೨) ಎಂಬ ಐವರು ಮೃತಪಟ್ಟಿದ್ದರೆ ೧೭ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮನವಿ ಒಪ್ಪಂದದ ಭಾಗವಾಗಿ, ಅಪರಾಧಿಗೆ ಯಾವುದೇ ಪೆರೋಲ್‌ನ ಸಾಧ್ಯತೆಯಿಲ್ಲದೆ ಸತತ ಐದು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಅಲ್ಲದೆ ಕೊಲೆಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ೪೮ ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಪ್ರಕರಣದ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಮೈಕೆಲ್ ಮೆಕ್‌ಹೆನ್ರಿ, ನೀವು ಕೇವಲ ಅವರ ಅಸ್ತಿತ್ವ ಹೊಂದಿರುವ ಕಾರಣಕ್ಕಾಗಿ ಕ್ರಿಮಿನಲ್ ಕೃತ್ಯ ಎಸಗಿದ್ದೀರಿ. ಹಾಗಾಗಿ ಅಂಥ ದ್ವೇಷವನ್ನು ಈ ನ್ಯಾಯಾಲಯ ಎಂದಿಗೂ ಒಪ್ಪುವುದಿಲ್ಲ. ಅಪರಾಧಿಯ ಕೃತ್ಯವು ಮಾನವ ಹೃದಯದ ಆಳವಾದ ದುರುದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.