ಶೂಟಿಂಗ್ ವೇಳೆ ನಟಿ ಪಲ್ಲವಿಗೆ ಗಾಯ

ಮುಂಬೈ, ಜ. ೧೭- ಬಹು ಚರ್ಚೆ ಹುಟ್ಟು ಹಾಕಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ನಟಿ ಪಲ್ಲವಿ ಜೋಶಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಸಿನಿಮಾದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಚಿತ್ರದ ಶೂಟಿಂಗ್ ವೇಳೆ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ.
ಚಿತ್ರೀಕರಣ ನಡೆಯುವಾಗ ಪಲ್ಲವಿ ಜೋಶಿ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಆದರೆ ಚಿತ್ರೀಕರಣವನ್ನು ನಿಲ್ಲಿಸದ ಅವರು, ಸಂಪೂರ್ಣ ಶೂಟಿಂಗ್ ಮುಗಿದ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗ ಅವರು ಆರೋಗ್ಯದಿಂದ ಇರುವುದಾಗಿ ಚಿತ್ರತಂಡ ತಿಳಿಸಿದೆ.
‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ತಮ್ಮ ಮುಂದಿನ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ನಲ್ಲಿ ನಿರತರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮತ್ತು ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಈ ಚಿತ್ರ ನಿರ್ಮಿಸುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಚಿತ್ರೀಕರಣವನ್ನು ಲಖೌನ್‌ನಲ್ಲಿ ಮುಗಿಸಿ, ಚಿತ್ರತಂಡ ಮುಂದಿನ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಆಗಮಿಸಿತ್ತು.
ಇನ್ನು ಸಿನಿಮಾದಲ್ಲಿ ಕನ್ನಡದ ನಟಿ ಸಪ್ತಮಿ ಗೌಡ ಕೂಡಾ ನಟಿಸುತ್ತಿದ್ದಾರೆ.