ಶುಶ್ರೂಷಕಿಯರು ಸೇವೆಗೆ ಮತ್ತೊಂದು ಹೆಸರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.23: ಅನಾರೋಗ್ಯ, ಅಪಘಾತಕ್ಕೆ ತುತ್ತಾದ, ಅಂಗವಿಕಲ ಹಾಗೂ ನವಜಾತ ಶಿಶುಗಳಿಗೆ ತಮ್ಮ ಆತ್ಮೀಯ ಮಾತುಗಳಿಂದ ಹಾಗೂ ಭಾವನಾತ್ಮಕ ನಡತೆಯಿಂದ ಆರೈಕೆ ಮಾಡುತ್ತಾ,ಶ್ರೇಷ್ಠ ಸೇವೆಮಾಡುತ್ತಿರುವವರು ಶುಶ್ರೂಷಕಿಯರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ದಾದಿಯರ ದಿನ ಹಾಗೂ ಉತ್ತಮ ದಾದಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು 30ವರ್ಷಗಳ ಹಿಂದೆ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೂಡ ಇಲ್ಲದ ಸಮಯದಲ್ಲಿ ದಾದಿಯರು ಮನೆ ಮನೆಗೆ ಭೇಟಿನೀಡಿ ಜ್ವರ, ಕೆಮ್ಮು, ನಗಡಿ,ಬೇಧಿ, ಹೊಟ್ಟೆನೋವು ಇತ್ಯಾದಿ ರೋಗಗಳಿಗೆ ಸ್ಥಳದಲ್ಲಿಯೇ ಮಾತ್ರೆಗಳನ್ನು ಕೊಟ್ಟು ಬೇಗ ಗುಣಮುಖರನ್ನಾಗಿ ಮಾಡುತ್ತಿದ್ದರು.ರೋಗಿಗಳ ಪಾಲಿಗೆ ಅವರೇ ವೈದ್ಯರಾಗಿದ್ದರು.ಯಾವ ಆರೋಗ್ಯ ಕೇಂದ್ರದಲ್ಲಿ ದಾದಿಯರು ಉತ್ತಮವಾಗಿರುತ್ತಾರೋ ಅಂತಹ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ದಾದಿಯರು ತಮ್ಮ ಕರ್ತವ್ಯವನ್ನು ತಾವು ಪ್ರಾಮಾಣಿಕತೆಯಿಂದ ಮಾಡಿದಾಗ ಇಂತಹ ಸನ್ಮಾನಗಳು,ಗೌರವಗಳು ಲಭಿಸುತ್ತವೆ ಎಂದರು.ಪ್ರಾಥಮಿಕ ಆರೋಗ್ಯ ಕೇಂದ್ರದ
ಗ್ರಾಮೀಣ ಸೇವೆಯ ವೈದ್ಯಾಧಿಕಾರಿ ಡಾಕ್ಟರ್ ಮಾಹೇಜಬೀನ್ ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಾದಿಯರಾದ ಮಂಗಳಗೌರಿ,ಮಾಧವಿ, ಸುಜಾತಾ ಹಾಗೂ ವೈದ್ಯಾಧಿಕಾರಿ ಡಾಕ್ಟರ್ ಮಾಹೇಜಬೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಆರೋಗ್ಯ ಸಹಾಯಕರಾದ ಚಂದ್ರ ಕಳಾವತಿ,ಕಿರಿಯ ಆರೋಗ್ಯ ಸಹಾಯಕರಾದ ಹುಲುಗೇಶಿ,ಚನ್ನಬಸವಯ್ಯ ಸ್ವಾಮಿ,ಶಿಕ್ಷಕರಾದ ಲೋಕೇಶ್,ಲಕ್ಷ್ಮೀ, ಲ್ಯಾಬ್ ಟೆಕ್ನೀಷಿಯನ್ ನಿರಂಜನ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಜಯಶ್ರೀ ಹಾಗೂ ಲಕ್ಷ್ಮೀದೇವಿ ಮುಂತಾದವರು ಉಪಸ್ಥಿತರಿದ್ದರು.