
ಕಲಬುರಗಿ,ಮೇ.12:ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾ, ಅವರ ಆರೈಕೆ ಮಾಡುವ ಶುಶ್ರೂಷಕರು ಆರೋಗ್ಯ ಪಾಲನಾ ಕ್ಷೇತ್ರದ ಬೆನ್ನೆಲುಬು ಎಂದು ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಡಾ. ವಿಕ್ರಮ್ ಸಿದ್ದಾರೆಡ್ಡಿ ಹಾಗೂ ಯುನೈಟ್ ಆಸ್ಪತ್ರೆಯ ನಿರ್ದೇಶಕಿ ಮತ್ತು ಹಿರಿಯ ನೇತ್ರತಜ್ಞೆ ಡಾ. ವೀಣಾ ಸಿದ್ದಾರೆಡ್ಡಿಯವರು ಅಭಿಪ್ರಾಯಪಟ್ಟರು.
ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಶುಶ್ರೂಕರ ದಿನಾಚರಣೆಯಲ್ಲಿ ಮಾತಾಡಿದ ಅವರು ವೈದ್ಯರು ನಿರ್ದೇಶನಗಳನ್ನು ಚಾಚೂತಪ್ಪದೇ ಪರಿಪಾಲಿಸುವ ಮೂಲಕ ಶುಶ್ರೂಷಕರು ರೋಗಿಗಳ ಆರೋಗ್ಯ ತ್ವರಿತವಾಗಿ ಸುಧಾರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದರು.
“ರೋಗಿಯ ಆರೈಕೆಯಲ್ಲಿ ಶುಶ್ರೂಷಕರು ನಿರ್ವಹಿಸು ಪಾತ್ರ ಬಹಳ ಮುಖ್ಯವಾದದ್ದು. ಶುಶ್ರೂಷಕರಿಲ್ಲದ ಆರೋಗ್ಯ ಕ್ಷೇತ್ರವನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ವೈದ್ಯರು ಒಂದು ರೀತಿಯ ಮಹತ್ವಪೂಣರ್ಣ ಜವಾಗ್ದಾರಿ ನಿರ್ವಹಿಸಿದರೆ ಶುಶ್ರೂಷಕರು ವೈದ್ಯರ ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ನಿಜ ಹೇಳಬೇಕೆಂದರೆ, ಶುಶ್ರೂಷಕರೇ ಇಡೀ ಆರೋಗ್ಯ ಕ್ಷೇತ್ರದ ಬೆನ್ನೆಲುಬಾಗಿದ್ದಾರೆ,” ಎಂದು ಅವರು ಈ ಸಂದರ್ಭದಲ್ಲಿ ಶುಶ್ರೂಷಕ ಸೇವೆಯ ಮಹತ್ವನ್ನು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯ ಮಹತ್ವವನ್ನು ಎತ್ತಿತೋರಿದ ಡಾ. ಸಿದ್ದಾರೆಡ್ಡಿಯವರು ಯಾವುದೇ ಒಂದು ಆಸ್ಪತ್ರೆಯ ಮೇಲೆ ರೋಗಿಗಳು ಎಷ್ಟರ ಮಟ್ಟಿಗೆ ವಿಶ್ವಾಸ ಬೆಳೆಸಿಕೊಂಡಿದ್ದಾರೆ ಎಂಬುದು ಆ ಆಸ್ಪತ್ರೆಯ ಶುಶ್ರೂಷಕರು ಯಾವ ರೀತಿಯಲ್ಲಿ ರೋಗಿಗಳನ್ನು ಆರೈಕೆ ಮಾಡುತ್ತಾರೆ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
“ಯುನೈಟೆಡ್ ಆಸ್ಪತ್ರೆಯಲ್ಲಿ ನುರಿತ ಹಾಗೂ ಒಳ್ಳೆಯ ಶುಶ್ರೂಷಕರಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಶಯವಾಗಿದೆ. ನಮ್ಮ ಶುಶ್ರೂಷಕರು ರೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸಿ ಅವರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ, ಅವರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುತ್ತಾರೆ, ಅವರು ಶೀಘ್ರವಾಗಿ ಗುಣಮುಖವಾಗುವುದಕ್ಕೆ ನೆರವಾಗುತ್ತಾರೆ,” ಎಂದು ತಮ್ಮ ಆಸ್ಪತ್ರೆಯ ಶುಶ್ರೂಕರನ್ನು ಶ್ಲಾಘಿಸಿದರು.
ಹಿರಿಯ ಮೂಳೆತಜ್ಞರಾದ ಡಾ. ರಾಜು ಕುಲ್ಕರ್ಣಿಯವರು ಯುನೈಟೆಡ್ ಆಸ್ಪತ್ರೆಯ ಆಡಳಿತ ಮಂಡಳಿಯು ತನ್ನ ಶುಶ್ರೂಕರನ್ನು ನೋಡಿಕೊಳ್ಳುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಯುನೈಟೆಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶುಶ್ರೂಷಕರಿಗೆ ಮತ್ತು ಅವರ ತೀರಾ ಹತ್ತಿರದ ಸಂಬಂಧಿಗಳಿಗೆ ಯುನೈಟೆಡ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದರ ಬಗ್ಗೆ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ. ವಿಕ್ರಮ್ ಸಿದ್ದಾರೆಡ್ಡಿಯವರು, ಶುಶ್ರೂಷಕರು ರೋಗಿಗಳಿಗೆ ತೋರಿಸುವ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಬದ್ದತೆಗಳಿಗೆ ಪ್ರತಿಯಾಗಿ ಯುನೈಟೆಡ್ ಆಸ್ಪತ್ರೆಯು ಅವರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡುವ ಮೂಲಕ ತನ್ನ ಮೆಚ್ಚುಗೆಯನ್ನು, ಕೃತಜ್ಞತೆಯನ್ನು ಸಲ್ಲಿಸುತ್ತಿದೆ ಎಂದರು.
ಯುನೈಟೆಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶುಶ್ರೂಷಕರ ಪರವಾಗಿ ಹಿರಿಯ ಶುಶ್ರೂಷಕರಾದ ಅಮ್ಜದ್, ಭವಾನಿ, ಪುಷ್ಪರಾಜ್, ತಿಪ್ಪಣ್ಣ, ಅಲ್ತಾಫ್ ಮತ್ತು ನವೀನ್ ಅವರನ್ನು ವೇದಿಕೆಯ ಮೇಲೆ ಕೂರಿಸಿ ಸನ್ಮಾನಿಸಲಾಯಿತು. ಕೆಲವು ಶುಶ್ರೂಷಕರು ತಮ್ಮ ವೃತ್ತಿಜೀವನ ಮತ್ತು ಯುನೈಟೆಡ್ ಆಸ್ಪತ್ರೆಯಲ್ಲಿನ ತಮ್ಮ ಸೇವೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಿರಿಯ ನೇತ್ರತಜ್ಞೆ ಹಾಗೂ ಯುನೈಟೆಡ್ ಆಸ್ಪತ್ರೆಯ ನಿರ್ದೇಶಕರಿ ಡಾ. ವೀಣಾ ಸಿದ್ದಾರೆಡ್ಡಿ, ಹಿರಿಯ ವೈದ್ಯರಾದ ಡಾ. ಮೊಹಹ್ಮದ್ ಬಶೀರ್, ಡಾ. ಲಿಯಾಖತ್ ಅಲಿ, ಡಾ. ರಾಜು ಕುಲ್ಕರ್ಣಿ, ಡಾ. ದಯಾನಂದ ರೆಡ್ಡಿ, ಡಾ. ಶಿವರಾಜ್ ಹಂಚಿನಾಳ, ಡಾ. ಶ್ರೀಕಾಂತ್ ರಾಥೋಡ್, ಡಾ. ರಾಕೇಶ್ ಬಿಂದ್ರೆ, ಡಾ. ಸುದರ್ಶನ್ ಲಾಖೆ ಮತ್ತಿತರರು ಉಪಸ್ಥಿತರಿದ್ದರು.
ಕೇಕ್ ಕತ್ತರಿಸಿ ಸವಿಯು ಮೂಲಕ ಅಂತರರಾಷ್ಟ್ರೀಯ ಶುಶ್ರೂಷಕ ದಿನಾಚರಣೆಯನ್ನು ಆಚರಿಸಲಾಯಿತು.