ಶುಭ ಶುಕ್ರವಾರ ಚರ್ಚ್‌ಗಳಲ್ಲಿ ಪ್ರಾರ್ಥನೆ

ಬೆಂಗಳೂರು, ಏ.೭- ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ರಾಜಧಾನಿ ಬೆಂಗಳೂರಿನಲ್ಲಿ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಣೆ ಮಾಡಲಾಯಿತು.
ನಗರದ ಎಂಜಿ ರಸ್ತೆಯ ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್, ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್, ಕ್ಲೀವ್ ಲ್ಯಾಂಡ್ ಟೌನ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಶಿವಾಜಿನಗರದ ಸೇಂಟ್ ಮೇರಿಸ್ ಚರ್ಚ್, ಹಡ್ಸನ್ ಚರ್ಚ್ ಸೇರಿದಂತೆ ಎಲ್ಲೆಡೆ ಚರ್ಚ್‌ಗಳಲ್ಲಿ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು.
ಚಾಮರಾಜಪೇಟೆಯ ಸೇಂಟ್ ಲ್ಯೂಕ್ ಚರ್ಚಿನ ಧರ್ಮಾಧ್ಯಕ್ಷ ರೇವ್ ಸತೀಶ್ ಪ್ರಾರ್ಥನಾ ವಿಧಿ ನೆರವೇರಿಸಿದರು.
ಬಳಿಕ ಅವರು ಗುಡ್ ಫ್ರೈಡೆ ಸಂದೇಶ ನೀಡಿ, ನ್ಯಾಯದಿಂದ ವಂಚಿತರಾದ ಮುಗ್ಧರ, ಆಸ್ಪತ್ರೆಗಳಲ್ಲಿ ನರಳುತ್ತಿರುವವರ, ಶೋಷಣೆಗೊಳಗಾದ ಜನರ ದುಃಖ ಸಂಕಟಗಳಲ್ಲಿ ಯೇಸುಕ್ರಿಸ್ತರು ನಿತ್ಯ ಶಿಲುಬೆಗೇರುತ್ತಿದ್ದಾರೆ. ಅವರು ಮುಗ್ಧರ ನೋವುಗಳ ಪ್ರತಿರೂಪ ಎಂದರು.
ಶೋಷಿತರ ಕಣ್ಣೀರನ್ನು ಒರೆಸುವ, ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿಯಾಗಿರುವ ಯೇಸು ಜಗದ ದುಃಖವನ್ನು ತೊಡೆಯಲು ಶಕ್ತನಾಗಿದ್ದಾರೆ ಎಂದು ನುಡಿದರು.
ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಹೊಣೆಗೇಡಿತನ, ಕ್ರೋಧ, ತಿಳಿಗೇಡಿತನಕ್ಕೆ ಯೇಸು ಉತ್ತರವಾಗಿದ್ದಾರೆ. ಯೇಸುಕ್ರಿಸ್ತ ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ಸಾವು, ನೋವು, ಸಂಕಟಗಳನ್ನು ಎದುರಿಸಿ ಮುನ್ನಡೆಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿ ಎಂದು ಅವರು ಹೇಳಿದರು.
ಇನ್ನೂ,ಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.