ಶುದ್ಧ ಮತದಾರರ ಪಟ್ಟಿ ಸಿದ್ದಪಡಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು:ಯಶವಂತ ವಿ. ಗುರುಕರ್

ಕಲಬುರಗಿ,ನ.9: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ 01-01-2023 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ನ.9(ಬುಧವಾರ) ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಶುದ್ಧ ಮತದಾರರ ಪಟ್ಟಿ ಸಿದ್ದಪಡಿಸಲು ಜಿಲ್ಲೆಯ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.
ಬುಧವಾರ ತಮ್ಮ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ ಕರೆಯಲಾದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪರಿಷ್ಕರಣೆ ನಿಟ್ಟಿನಲ್ಲಿ ಪ್ರತಿ ದಿನ ಬೂತ್ ಮಟ್ಟದಲ್ಲಿ ಸ್ವೀಕೃತವಾಗುವ ಅರ್ಜಿಗಳ ಮಾಹಿತಿ ಬೂತ್ ಲೇವೆಲ್ ಏಜೆಂಟ್ ಅವರಿಗೆ ನೀಡಲಾಗುತ್ತದೆ. ಇದನ್ನು ವೀಕ್ಷಿಸಿ ರಾಜಕೀಯ ಪಕ್ಷಗಳು ತಮ್ಮ ತಕರಾರುಗಳಿದಲ್ಲಿ ಸಲ್ಲಿಸಬಹುದು. ಒಟ್ಟಾರೆ ಪಾರದರ್ಶಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಲು ಬೂತ್ ಲೇವೆಲ್ ಏಜೆಂಟ್‍ಗಳು ಸಕ್ರೀಯರಾಗಿರಬೇಕು ಎಂದರು.
ಸಾರ್ವಜನಿಕರ ವೀಕ್ಷಣೆಗೆ ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿ ಸೇರಿದಂತೆ ಜಿಲ್ಲೆಯ 2,368 ಮತಗಟ್ಟೆಯಲ್ಲಿ ಪ್ರಕಟಿಸಲಾಗಿದೆ. ಇಂದು ನಾನೇ ಸ್ವತ ಕಲಬುರಗಿ ಗ್ರಾಮೀಣ ಕ್ಷೇತ್ರದ ಧರ್ಮಾಪೂರ ಮತಗಟ್ಟೆ ಸಂಖ್ಯೆ. 226ರಲ್ಲಿ ಪಟ್ಟಿ ಪ್ರಕಟಿಸಿ ಬಂದಿದ್ದೇನೆ ಎಂದು ತಿಳಿಸಿದರು.
ಕರಡು ಮತದಾರರ ಪಟ್ಟಿಗೆ ಆಕ್ಷೇಣೆಗಳನ್ನು ಸಲ್ಲಿಸಲು ಡಿಸೆಂಬರ 8 ಕೊನೆಯ ದಿನವಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ್ 26 ರೊಳಗೆ ವಿಲೇವಾರಿ ಮಾಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಗೆ ನವೆಂಬರ್ 12 ಮತ್ತು 20, ಡಿಸೆಂಬರ 3 ಮತ್ತು 4 ರಂದು ವಿಶೇಷ ಅಭಿಯಾನ ಹಮ್ಮಿಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5, 2023 ರಂದು ಪ್ರಕಟಿಸಲಾಗುತ್ತದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ನಿಟ್ಟಿನಲ್ಲಿ ಮನೆ-ಮನೆಗೆ ಬಿ.ಎಲ್.ಓ.ಗಳು ಬಂದಾಗ ಹೆಸರು ಸೇರ್ಪಡೆಗೆ ಅಗತ್ಯ ದಾಖಲಾತಿಗಳು ನೀಡಿದಲ್ಲಿ ಸ್ಥಳದಲ್ಲಿಯೆ ಗರುಡಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ. ಮತದಾರ ಪಟ್ಟಿಯಿಂದ ಯಾರು ಅರ್ಹರು ಹೊರಗುಳಿಯದಂತೆ ಮನೆ-ಮನೆ ಸರ್ವೇ ಮಾಡಲಾಗುತ್ತದೆ. ಮತದಾರರ ಪಟ್ಟಿಯನ್ನು ಹೆಸರು ಸೇರ್ಪಡೆಗೊಳಿಸಲು ನಮೂನೆ 6ರಲ್ಲಿ, ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7 ಹಾಗೂ ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾವಣೆಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಓಟರ್ ಹೆಲ್ಪಲೈನ್ ಆ್ಯಪ್ ಅಥವಾ www.nvsp.in ಆನ್‍ಲೈನ್ ಮೂಲಕವು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
21.64 ಲಕ್ಷ ಮತದಾರರು: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 10,96,041 ಪುರುಷರು ಮತ್ತು 10,68,186 ಮಹಿಳೆಯರು ಸೇರಿದಂತೆ ನವೆಂಬರ್ 7ರ ಅಂತ್ಯಕ್ಕೆ 21,64,227 ಮತದಾರರಿದ್ದಾರೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಮಾಹಿತಿ ನೀಡಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ ಮಹಾಂತೇಶ ಮುಡಬಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಭೂಪೇಂದ್ರ ಸಿಂಗ್, ಶರಣಬಸಪ್ಪ ಹಿರೇಮಠ, ರಾಜಶೇಖರ್, ಸಿದ್ದು ಪಾಟೀಲ, ಸಚಿನ್ ಬಿ.ಕೆ., ಮಾಣಿಕ್ ಪಿ. ಗುರುಪ್ರಸಾದ, ಮಹೇಶಕುಮಾರ ರಾಠೋಡ ಉಪಸ್ಥಿತರಿದ್ದರು.