ಶುದ್ಧ ಕುಡಿವ ನೀರು ಪೂರೈಕೆ ನಿರ್ಲಕ್ಷ್ಯಿಸಿದರೆ ಕಟ್ಟುನಿಟ್ಟಿನ ಕ್ರಮ

ರಾಯಚೂರು.ಜು.೧೪- ನಗರ ಸೇರಿದಂತೆ ಜಿಲ್ಲೆಯಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆಯಲ್ಲಿ ಯಾವುದೆ ಲೋಪ ನಡೆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಶುದ್ಧ ಕುಡಿವ ನೀರಿನಿಂದ ಈಗಾಗಲೇ ನಗರದ ಏಳು ಜನ ಮೃತಪಟ್ಟಿದ್ದಾರೆ. ಮಾನ್ವಿ ತಾಲೂಕಿನಲ್ಲೂ ಇಂತಹದ್ದೆ ಸಂಭವಿಸಿದೆ. ಮತ್ತೇ ಇದು ಮರುಕಳುಹಿಸದಂತೆ ಎಚ್ಚರ ವಹಿಸಲು ಸೂಚಿಸಿದರು. ಶುದ್ಧ ಕುಡಿವ ನೀರಿಗಾಗಿ ಕೆಕೆಆರ್‌ಡಿಬಿಯಿಂದ ೧೦ ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಯಾವುದೇ ಕಾರಣಕ್ಕೂ ಸಮಸ್ಯೆ ಉದ್ಭವಿಸದಂತೆ ಎಚ್ಚರ ವಹಿಸಬೇಕು.
ಚರಂಡಿಗಳಲ್ಲಿ ಪೈಪ್ ಲೈನ್ ಹಾಕದಂತ ಪ್ರತಿಯೊಬ್ಬ ಅಧಿಕಾರಿಯೂ ಗಮನ ಹರಿಸಬೇಕು.ಸಾರ್ವಜನಿಕರು ಶುದ್ಧ ಕುಡಿವ ನೀರಿನ ಸಮಸ್ಯೆ ಎದುರಿಸದಂತೆ ಗಮನ ಹರಿಸಲು ಸೂಚಿಸಿದರು. ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ ನಗರಸಭೆ ಆಯುಕ್ತ ಗುರುಲಿಂಗಪ್ಪ ಅವರು ೩೫ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ೧೭೦ ಲೀಕೇಜ್‌ಗಳು ಸರಿಪಡಿಸಲಾಗಿದೆ. ನಗರಸಭೆ ಮತ್ತು ಡಿಹೆಚ್‌ಓ ಸಮಿತಿಗಳು ಕುಡಿವ ನೀರಿನ ನಿತ್ಯ ಪರೀಕ್ಷೆ ನಡೆಸಲಾಗುತ್ತಿದೆಂದು ತಿಳಿಸಿದರು. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡುತ್ತಾ, ರಾಂಪೂರು ಜಲಾಶಯದಲ್ಲಿ ಪ್ರಸ್ತುತ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ.
ಕೃಷಿ ವಿವಿಯ ಪ್ರಾಯೋಗಲಾಯದಲ್ಲಿ ಬಯೋಲಾಜಿಕಲ್ ಪರೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಪೈಪ್ ಲೈನ್ ಹೊಡೆದು ಹೋದ ಕಡೆಯಲ್ಲಿ ಆಯಾ ವಾರ್ಡಿನ ನಗರಸಭೆ ಸದಸ್ಯರೊಂದಿಗೆ ಸೇರಿ ದುರಸ್ತಿ ಕೈಗೊಳ್ಳಲಾಗುತ್ತದೆ. ಕುಡಿವ ನೀರಿನ ನಿರ್ವಹಣೆಗಾಗಿ ಅಗತ್ಯ ಅನುದಾನ ನೀಡಲಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿಯೂ ನೀರಿನ ಪರೀಕ್ಷೆ ಅಗತ್ಯವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನಡುಗಡ್ಡೆ ಗ್ರಾಮಗಳ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ಅಗತ್ಯವಿದೆ. ಜೆಸ್ಕಾಂ ವಿಭಾಗದ ಚರ್ಚೆಯ ಸಂದರ್ಭದಲ್ಲಿ ಜೆಸ್ಕಾಂನಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಚರ್ಚೆ ನಡೆಯಿತು.
ಶಾಸಕರು ೭೫ ಲೈನ್ ಮ್ಯಾನ್ ಹುದ್ದೆಗಳಲ್ಲಿ ೪೩ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು. ತಕ್ಷಣವೇ ಲೈನ್‌ಮ್ಯಾನ್‌ಗಳನ್ನು ನೇಮಿಸುವುದಾಗಿ ಸಚಿವರು ಭರವಸೆ ನೀಡಿದರು. ಜಲಧಾರೆ ಯೋಜನೆಯ ವಂತಿಕೆ ಸಂಗ್ರಹದಿಂದ ೧೦೦ ಕೋಟಿ ಹಣ ಬಂದಿರುವುದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭೆ ಗಮನಕ್ಕೆ ತಂದರು. ಕಳೆದ ಎರಡು ತಿಂಗಳಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆಂದರು. ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಪ್ರವಾಹದಿಂದ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ರಸಗೊಬ್ಬರ, ಬೀಜ ಸಮಸ್ಯೆಯಾಗದಂತೆ ಗಮನ ಹರಿಸಲು ಸೂಚಿಸಿದರು.