ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಗ್ರಾಮಸ್ಥರು ಆಕ್ರೋಶ

ಮುದಗಲ್,ಫೆ.೨೭- ಸಮೀಪದ ವಂದಾಲಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ವಂದಾಲಿ ಗ್ರಾಮದಲ್ಲಿ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಗ್ರಾಮದಲ್ಲಿ ಇರುವ ಕೊಳವೆ ಬಾವಿಯಲ್ಲಿ ಜಂಗ್ ನೀರು, ಹಾಗೂ ಫ್ಲೋರೈಡ್ ನೀರು ಬರುತ್ತಿದೆ. ಈ ನೀರು ಸೇವಿಸುವುದರಿಂದ ಜನರ ಆರೋಗ್ಯ ಕೆಡುತ್ತಿದೆ. ಈ ನೀರು ಸೇವಿಸಿ ದೊಡ್ಡನಗೌಡ ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ.
ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರಯೋಜನವಾಗಿಲ್ಲ. ತಮಗೂ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಅಂತೋಣಿ ಮುದುಕಪ್ಪ, ಜಾಲಪ್ಪ, ಆರೋಗ್ಯಪ್ಪ, ವಿಶ್ವನಾಥ, ದ್ಯಾಮಣ್ಣ, ಶಾಂತಪ್ಪ, ಶೀಲಪ್ಪ, ಸುರೇಶ, ಗ್ಯಾನಪ್ಪ ದೂರಿದರು. ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಎಂದು ಮನವಿ ಪತ್ರ ಸಲ್ಲಿಸಿದರು.