ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ವಿಫಲ-ಸುತ್ತಕೋಟಿ

ಬ್ಯಾಡಗಿ,ಜ6: ಗ್ರಾಮಾಂತರ ಪ್ರದೇಶಗಳಲ್ಲಿ ಪರಿಶುದ್ಧ ಕುಡಿಯುವ ನೀರು ಪೂರೈಸಿ ಜನರನ್ನು ಕಾಯಿಲೆ ಮುಕ್ತಗೊಳಿಸುವ ಗುರಿಯೊಂದಿಗೆ ಪ್ರಾರಂಭಿಸಲಾದ ಶುದ್ಧ ಕುಡಿಯುವ ನೀರು ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ವಿಫಲವಾಗಿರುವ ಖಾಸಗಿ ಏಜೆನ್ಸಿಗಳು ಆ ಘಟಕಗಳನ್ನೇ ರೋಗಗ್ರಸ್ತ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತಾ.ಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಕೆಡಿಪಿ ಸಭೆಯಲ್ಲಿ ಹರಿಹಾಯ್ದ ಘಟನೆ ನಡೆದಿದೆ.
ಸ್ಥಳೀಯ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತಂತೆ ತರಾಟೆಗೆ ತೆಗೆದುಕೊಂಡರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರದ ಅನುದಾನದಡಿ ಖಾಸಗಿ ಏಜೆನ್ಸಿಗಳು ಘಟಕಗಳನ್ನು ಅಳವಡಿಸಿದ ಬಳಿಕ ನಿರ್ವಹಣೆ ಇರಲಿ, ದುರಸ್ತಿಯನ್ನೂ ಮಾಡುತ್ತಿಲ್ಲ. ನಿರ್ವಹಣೆ ವೆಚ್ಚ ದುಬಾರಿಯಾಗುತ್ತಿದ್ದಂತೆ ಗ್ರಾಪಂಗಳು ಅವುಗಳ ಕಡೆಗೆ ತಿರುಗಿ ನೋಡುವ ಗೋಜಿಗೂ ಹೋಗುತ್ತಿಲ್ಲ. ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಯಕುಮಾರ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ, ಶುದ್ಧೀಕರಣ ಸಾಮರ್ಥ್ಯ ಹಾಗೂ ಕ್ವಾಯಿನ್ ಬಾಕ್ಸ್ ಕಳ್ಳತನದ ಬಗ್ಗೆ ದೂರುಗಳಿವೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿರುವ ಘಟಕಗಳ ನೈಜ ಚಿತ್ರಣ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೇ ಘಟಕಗಳ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲು ನಿರ್ವಹಣಾ ಏಜೆನ್ಸಿಗಳ ಮೂಲಕ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಇಓ ಜಯಕುಮಾರ ಅವರು, ತಾಲೂಕಿನ ಕಾಗಿನೆಲೆ ಗ್ರಾಮದ ಕೆರೆಯ ಏರಿಯ ಮೇಲೆ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸದೆ ಯಾವ ಉದ್ದೇಶದಿಂದ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೀರಾ..? ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರಲ್ಲದೇ ಸಾರ್ವಜನಿಕರೊಬ್ಬರು ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣ ಅಪೂರ್ಣವಾಗಿದೆ ಎಂದರು.
ಇ- ಉತಾರಕ್ಕಾಗಿ ಪರದಾಟ..!!
ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಯೋಜನೆಯಡಿ ಸರ್ಕಾರ ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಗಳನ್ನು ಮಂಜೂರು ಮಾಡಿದ್ದು, ಮನೆಗಳ ಫಲಾನುಭವಿಗಳಿಗೆ ಅನುದಾನ ಬಿಡುಗಡೆ
ಮಾಡಲು ಇ-ಉತಾರ ಲಭ್ಯವಾಗುತ್ತಿಲ್ಲ. ಇದರಿಂದ ಬಡ ಜನರಿಗೆ ತೊಂದರೆಯಾಗುತ್ತಿದ್ದು, ಅನುದಾನ ವಾಪಸ್ಸಾಗುವ ಭೀತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ಈ ಸಮಸ್ಯೆಯು ಕುರಿತು ಪ್ರಸ್ತಾವನೆ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೇಗೌಡ್ರ ಇವರು ಅಕ್ರಮ ಮದ್ಯಮಾರಾಟ ಕುರಿತು ಮಾತನಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಆಬಕಾರಿ ನಿರೀಕ್ಷಕ ಪ್ರಕಾಶ ಉಪಸ್ಥಿತರಿದ್ದು, ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು.