ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಚನೆ

ಹಾವೇರಿ:ಜ.13: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸೂಕ್ತರೀತಿಯಲ್ಲಿ ಆಗುತ್ತಿಲ್ಲ, ಹಲವಾರು ಘಟಕಗಳು ಸ್ಥಗಿತಗೊಂಡಿರುವ ದೂರುಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಏಕನಾಥ ಭಾನುವಳ್ಳಿ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಗಳ ನಿರ್ವಹಣೆಯಲ್ಲಿರುವ 117 ಘಟಕಗಳ ನಿರ್ವಹಣೆಯನ್ನು ಸೊಸೈಟಿಗಳು ಮಾಡಬಹುದು ಇಲ್ಲವಾದಲ್ಲಿ ಮುಚ್ಚಳಿಕೆ ಪತ್ರಬರೆದು ಇಲಾಖೆಗೆ ಹಸ್ತಾಂತರಿಸಬಹುದು. ಈ ಕುರಿತು ಸೊಸೈಟಿಗಳಿಗೆ ಪತ್ರಬರೆಯಲು ತಿಳಿಸಿದರು.
ಕೋಲ್ಡ್‍ಸ್ಟೋರೇಜ್ ಘಟಕ ಸ್ಥಾಪನೆಗೆ ತೋಟಗಾರಿಕೆ ಇಲಾಖೆಯಲ್ಲಿ ಶೇ.50ರ ಸಬ್ಸಿಡಿ ಹಾಗೂ ಗೋದಾಮು ನಿರ್ಮಾಣಕ್ಕೆ ನಿರ್ಮಾಣಕ್ಕೆ ಶೇ.25 ಸಬ್ಸಿಡಿ ಇದೆ. ಅತಿವೃಷ್ಟಿಯಿಂದ ಈರುಳ್ಳಿ ಬೆಳೆಹಾನಿಯಾಗಿದೆ.
ಈ ಕುರಿತು ಗ್ರಾಮೀಣ ಭಾಗದ ರೈತರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅವರು ಮಾತನಾಡಿ, ಜಿಲ್ಲೆಯಲ್ಲಿ 772 ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಮಾಹಿತಿ ನೀಡಲು ಎಲ್ಲ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಘಟಕಗಳು ಹಲವಾರು ಕಾರಣಗಳಿಂದ ಸ್ಥಗಿತಗೊಂಡಿರಬಹುದು. ಸಮಸ್ಯೆಗಳ ಮಾಹಿತಿ ನೀಡಲು ಈಗಾಗಲೇ ಸಹಾಯವಾಣಿ ನೀಡಲಾಗಿದೆ. 32 ಘಟಕಗಳನ್ನು ಮಾತ್ರ ಸರಿಪಡಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ವಿವಿಧ ಸದಸ್ಯರು ಶುದ್ಧ ನೀರಿನ ಘಟಕಗಳ ದುರಸ್ಥಿ, ತುಂಗಾ ಮೇಲ್ದಂಡೆ ಯೋಜನೆ ಪ್ರದೇಶದಲ್ಲಿ ಜವಳು ಹಾಗೂ ಕಾಲುವೆಗಳ ಬಸಿನೀರಿನಿಂದ ಹಾಳಾದ ಬೆಳೆಯ ಪರಿಹಾರ, ಭೂಸ್ವಾಧೀನ ಪರಿಹಾರ ಹಣ ರೈತರಿಗೆ ಜಮೆ ಕುರಿತು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಸತಿ ಗೃಹ ನಿರ್ಮಾಣ, ಅಕಾಲಿಕೆ ಮಳೆಯಿಂದ ಹಾಳಾದ ಜೋಳ, ಕಡ್ಲಿ, ಕುಸುಬಿ ಬೆಳೆ ಸಮೀಕ್ಷೆ, ಬೆಳೆಹಾನಿ ಇನ್‍ಫುಟ್ ಸಬ್ಸಿಡಿ ಹಣ ದುರುಪಯೋಗಪಡಿಸಿಕೊಂಡವರನ್ನು ಎಸಿಬಿಗೆ ತನಿಖೆಗೆ ಒಳಪಡಿಸಲು, ಜಿಲ್ಲಾ ಪಂಚಾಯತ್ ರಸ್ತೆಗಳಲ್ಲಿ ಹಾಗೂ ಪಿ.ಡಬ್ಲ್ಯೂಡಿ ರಸ್ತೆ ಬದಿಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳಿಂದ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಕುರಿತು ಸಭೆಯ ಗಮನ ಸೆಳೆದರು.
ಜಿ.ಪಂ.ಅಧ್ಯಕ್ಷರು ತುಂಗಾ ಮೇಲ್ದಂಡೆ ಯೋಜನೆ ಜವಳು ಪ್ರದೇಶದಲ್ಲಿ ಬೆಳೆಹಾನಿಗೆ ಪರಿಹಾರ ನೀಡಬೇಕು ಹಾಗೂ ಕಾಲುವೆಗಳ ಲೀಕೇಜ್ ಸರಿಪಡಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು ಎಂದು ಯುಟಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಖಾಯಂ ಅಧಿಕಾರಿಗಳಿಲ್ಲ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ರೈತರಿಗೆ ನೀಡಬೇಕಾದ ಪರಿಹಾರ ಹಣ ಲೆಕ್ಕಹಾಕಲು ಸಮಯಬೇಕು ಎಂದ ಅವರು ಕಾಲುವೆಗಳ ಲೀಕೇಜ್ ತಡೆಗೆ ತುರ್ತು ಕ್ರಮವಹಿಸಬೇಕು ಎಂದು ಯುಟಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರು ಮಾತನಾಡಿ, ಬೆಳಹಾನಿ ಪರಿಹಾರಧನ ದುರುಪಯೋಗಪಡಿಸಿಕೊಂಡವರ ವಿರುದ್ಧ ಎಸಿಬಿ ತನಿಖೆ ನಡೆದಿದೆ. ಎಷ್ಟು ಹಣ ಯಾವ ಖಾತೆಯಿಂದ ಯಾರಿಗೆ ಹೋಗಿದೆ ಎಂಬುವುದನ್ನು ಪತ್ತೆ ಹಚ್ಚಲಾಗಿದೆ. ಜಲಾನಯನ ಯೋಜನೆಗೆ 4.85 ಕೋಟಿ ರೂ. ಅನುದಾನ ಮಂಜೂರಾಗಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರತಿ ತಾಲೂಕಿಗೆ ರೂ.25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಪಂಚಾಯತ್ 4010.07 ಕಿ.ಮೀ ರಸ್ತೆ, ಕ್ರೀಡಾ ಇಲಾಖೆ ಕಾಮಗಾರಿ ಬದಲಾವಣೆ, ರಾಣೇಬೆನ್ನೂರುನಲ್ಲಿ ಐ.ಟಿ.ಐ. ಕಾಲೇಜಿಗೆ 1.2 ಎಕರೆ ಜಾಗೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಟಾಕನಗೌಡ ಪಾಟೀಲ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪೂರ, ಜಿ.ಪಂ.ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.