ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಪಾಲಿಕೆ ಮುಂದೆ ಪ್ರತಿಭಟನೆ

ಕಲಬುರಗಿ,ಜು.25: ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವಂತೆ, ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಸೋಮವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ನೀರು ಮನುಷ್ಯರ ಪ್ರಥಮ ಮತ್ತು ಅಂತಿಮ ಅವಶ್ಯಕತೆ. ಅದರಲ್ಲಿಯೂ ಕುಡಿಯುವ ನೀರಿಲ್ಲದಿದ್ದರೆ ಮಾನವ ಸಮುದಾಯ ಭೂಮಿಯ ಮೇಲಿಂದ ಅಳಿದು ಹೋಗುವುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ನೀರು ನಿಸರ್ಗದ ಕೊಡುಗೆ. ಅದನ್ನು ಯಾವ ಕಾರ್ಖಾನೆಯಲ್ಲಿ ಉತ್ಪಾದಿಸುವುದಿಲ್ಲ. ಹೀಗಿರುವಾಗಲೂ ಇಂದು ನೀರಿನ ನಿರ್ವಹಣೆಯಲ್ಲಿ ಖಾಸಗಿಯವರ ಕೈಗೆ ಕೊಡಲಾಗುತ್ತಿದೆ. ಇದು ಅಕ್ಷಮ್ಯ ಅಷ್ಟೇ ಅಲ್ಲ ಕ್ರೂರತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದರು.
ನಗರವು ಬೃಹತ್ತಾಗಿ ಬೆಳೆಯುತ್ತಿದೆ. ಆದಾಗ್ಯೂ, ತಕ್ಕ ಸೌಕರ್ಯಗಳಿಲ್ಲದೇ ನಾಗರಿಕರು ತತ್ತರಿಸುತ್ತಿದ್ದಾರೆ. ಕನಿಷ್ಠ ಕುಡಿಯುವ ನೀರು ಸಿಗದೇ ಜನಸಾಮಾನ್ಯರು ಮಾರಣಾಂತಿಕ ಕಾಯಿಲೆಗಳಿಂದ ನರಳಿ ಸಾಯುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಪಾಲಿಕೆಯ ನಲ್ಲಿ ಪೈಪಿನಲ್ಲಿ ಚರಂಡಿ ನೀರು ಸೇರಿಕೊಂಡು ಮಲಮಿಶ್ರಿತ ನೀರು ಬರುತ್ತಿದೆ. ಮಳೆಗಾಲದ ಕಾರಣಕ್ಕೆ ಹೊಲಸು ನೀರು ಎಲ್ಲೆಲ್ಲೂ ಹರಿದಾಡುತ್ತಿದೆ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೆ ಕನಿಷ್ಠ ಕಾಳಜಿ ಜನರ ಕುರಿತು ಇದ್ದಂತಿಲ್ಲ. ಮಳೆ ನೀರನ್ನು ಸೋಸದೇ ನೇರವಾಗಿ ನಲ್ಲಿಗೆ ಬಿಡುವಂತೆ ತೋರುತ್ತಿದೆ. ಹಣವಿದ್ದವರು ಶುದ್ಧ ಕುಡಿಯುವ ನೀರನ್ನು ಖರೀದಿ ಮಾಡಿ ಕುಡಿಯಬಹುದು. ಆದಾಗ್ಯೂ, ಬಡವರು, ನಿರ್ಗತಿಕರು ದಿನಾಲೂ ಹಣ ಕೊಟ್ಟು ಶುದ್ಧ, ಆರೋಗ್ಯಯುಕ್ತ ನೀರು ಕುಡಿಯಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು.
ಈಗ ಸರಬರಾಜು ಆಗುತ್ತಿರುವ ನೀರು ಕುಡಿದು ಸಾಕಷ್ಟು ಜನರು ಸೋಂಕಿತರಾಗುತ್ತಿದ್ದಾರೆ. ಆದ್ದರಿಂದ ಪ್ರತಿ ದಿನ ಶುದ್ಧ ಕುಡಿಯುವ ನೀರು ಪೂರೈಸುವಂತೆ, ನೀರಿನ ಖಾಸಗೀಕರಣ ನಿಲ್ಲಿಸಿ ಪಾಲಿಕೆಯ ಮೂಲಕವೇ ಸರಬರಾಜು ಮಾಡುವಂತೆ, ನೀರು ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡದಿರುವಂತೆ, ಈಗಾಗಲೇ ನೀಡಿದ್ದನ್ನು ರದ್ದುಪಡಿಸುವಂತೆ, ನೀರು ಶುದ್ಧೀಕರಣ ಘಟಕ ಬಲಪಡಿಸುವಂತೆ, ತಕ್ಷಣವೇ ಶುದ್ಧ ಕುಡಿಯುವ ನೀರು ಪೂರೈಸುವಂತೆ ಅವರು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಕೆ. ನೀಲಾ, ಜಿಲ್ಲಾಧ್ಯಕ್ಷೆ ಶ್ರೀಮತಿ ಚಂದಮ್ಮ ಗೋಳಾ, ಜಗದೇವಿ ನೂಲಕರ್, ಸೈನಾಜ್ ಅಕ್ತರ್ ಮುಂತಾದವರು ಪಾಲ್ಗೊಂಡಿದ್ದರು.