ಶುದ್ಧ ಕುಡಿಯುವನೀರಿನ ದರ ದುಬಾರಿ

-ಮೊಹಮ್ಮದ್
ಬೆಂಗಳೂರು, ಆ.೨೯- ವಿದ್ಯುತ್ ದರ ಹೆಚ್ಚಳ ಬೆನ್ನಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಬೆಲೆ ದುಪ್ಪಟ್ಟಾಗಿದ್ದು, ಸೆಪ್ಟೆಂಬರ್ ೧ ರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಗರದಾದ್ಯಂತ ನೀರು ವಿತರಣಾ ಘಟಕಗಳನ್ನು ಸ್ಥಾಪಿಸಿದೆ.
ಆದರೆ, ೨೦ ಲೀಟರ್‌ಗೆ ೫ ರೂಪಾಯಿ ಇದ್ದ ಬೆಲೆ, ಇದೀಗ ೧೦ ರೂಪಾಯಿ ಆಗಿದ್ದು, ಸೆಪ್ಟೆಂಬರ್೧ ರಿಂದ ನೀರಿಗಾಗಿ ಎರಡು ಕಾಯಿನ್ ಬಳಕೆ ಮಾಡುವಂತೆ ಸೂಚಿಸಿ ದರ ನಿಗದಿ ಮಾಡಿರುವ ಪೋಸ್ಟರ್‌ಗಳನ್ನು ನೀರಿನ ಎಲ್ಲಾ ಘಟಕಗಳ ಎದುರು ಅಂಟಿಸಲಾಗಿದೆ.
ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ, ಸ್ಥಳೀಯ ಶಾಸಕರು ಹಾಗೂ ಇತರರ ಅನುದಾನದಲ್ಲಿ ಘಟಕ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಲಾಗಿದೆ. ಇದೀಗ ವಿದ್ಯುತ್ ದರ ಸರಿದೂಗಿಸಲು ಗ್ರಾಹಕರಿಂದಲೇ ಹಣ ವಸೂಲಿ ಮಾಡಲಾಗುತ್ತಿದೆ.
ಘಟಕದಲ್ಲಿರುವ ವಿದ್ಯುತ್ ಆಧಾರಿತ ಫಿಲ್ಟರ್ ಯಂತ್ರಗಳು ದಿನದ ೨೪ ಗಂಟೆಯೂ ಸಕ್ರಿಯವಾಗಿರುತ್ತವೆ. ಹೀಗಾಗಿ, ವಿದ್ಯುತ್ ಬಳಕೆ ಹೆಚ್ಚು. ಅನಿವಾರ್ಯವಾಗಿ, ನೀರಿನ ದರವನ್ನು ದುಪ್ಪಟ್ಟು ಮಾಡಲಾಗಿದೆ ಎಂದು ಘಟಕವೊಂದರ ಸಿಬ್ಬಂದಿ ಹೇಳಿದರು.
ಈ ಕುರಿತು ಗ್ರಾಹಕರು ಪ್ರತಿಕ್ರಿಯಿಸಿ, ವಾರಕ್ಕೆ ನಾಲ್ಕು ಬಾರಿ ೨೦ ಲೀಟರ್ ನೀರು ತೆಗೆದುಕೊಂಡು ಹೋಗುತ್ತೇವೆ. ಆದರೆ, ಸೆಪ್ಟೆಂಬರ್ ನಿಂದ ೫ ಎರಡು ನಾಣ್ಯ ಹಾಕಬೇಕಾಗಿದೆ. ಯಾವುದೇ ಸೂಚನೆ ನೀಡದೇ ಏರಿಕೆ ಮಾಡಿರುವುದು ಖಂಡನೀಯಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರು, ಕೂಲಿ ಕೆಲಸ ಮಾಡುವವರು, ನೌಕರಸ್ಥರು, ವ್ಯಾಪಾರಿಗಳು, ಹೋಟೆಲ್‌ನವರು ಘಟಕಗಳಿಂದ ನೀರು ಕೊಂಡೊಯ್ಯುತ್ತಾರೆ. ಬೆಲೆ ಏರಿಕೆ ಮಾಡಿರುವುದರಿಂದ ಅವರೆಲ್ಲರಿಗೂ ಹೊರೆ ಆಗಿದೆ. ತೀರ್ಮಾನ ಕೈಗೊಳ್ಳುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಬೇಕಿತ್ತು ಎಂದು ಹಲವರು ತಿಳಿಸಿದರು.
ಈ ಕುರಿತು ಬಿಬಿಎಂಪಿ ಮುಖ್ಯ ಅಭಿಯಂತರೊಬ್ಬರು ಮಾತನಾಡಿ, ನಗರದಲ್ಲಿ ಬಿಬಿಎಂಪಿ ವತಿಯಿಂದ ಕೊಳವೆಬಾವಿ ಕೊರೆಸಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಿ ನಿರ್ವಹಣಾ ಜವಾಬ್ದಾರಿಯನ್ನು ಏಜೆನ್ಸಿಗಳಿಗೆ ಗುತ್ತಿಗೆಗೆ ನೀಡಲಾಗಿದೆ. ಇನ್ನು ಕೆಲವೆಡೆ ಸಂಸ್ಥೆಗಳೇ ಕೊಳವೆಬಾವಿ ಕೊರೆದು ನಿರ್ವಹಣೆ ಮಾಡುತ್ತಿವೆ.
ಹೀಗಾಗಿ ಒಪ್ಪಂದ ಯಾವ ರೀತಿ ಆಗಿದೆ ಎಂಬುದನ್ನು ಪರಿಶೀಲಿಸಿ ನೀರಿನ ಬೆಲೆ ಏರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಟ್ಟಿನಲ್ಲಿ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ೨೦ ಲೀಟರ್ ಕ್ಯಾನ್ ನೀರು ತುಂಬಿಸಲು ಸೆಪ್ಟೆಂಬರ್ ೧ ರಿಂದ ದುಪ್ಪಟ್ಟು ಹಣ ನೀಡಬೇಕಾಗಿದೆ, ಇದರಿಂದ ಮಧ್ಯಮವರ್ಗದ ಕುಟುಂಬ ಮತ್ತು ಕೊಳಗೇರಿ ನಿವಾಸಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಮೇಲೆ ಪರಿಣಾಮ ಬೀರಲಿದೆ.