ಶುದ್ದ ನೀರು ಪೂರೈಕೆಗೆ ಆದ್ಯತೆ ನೀಡಿ

ಭಾಲ್ಕಿ:ಅ.28: ಗ್ರಾಮೀಣ ಭಾಗಗಳಲ್ಲಿ ಜೆಜೆಎಂ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪ್ರತಿ ಮನೆಗೂ ಶುದ್ಧ ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಬೀದರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೀದರ್, ತಾಲೂಕು ಪಂಚಾಯಿತಿ ಭಾಲ್ಕಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜೆಜೆಎಂ 3 ಮತ್ತು 4ಹಂತದಲ್ಲಿ ಆಯ್ಕೆಯಾದ ಕ್ಷೇತ್ರ ಮಟ್ಟದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜೆಜೆಎಂ ವಿವಿಧ ಹಂತಗಳಲ್ಲಿ ಆಯ್ಕೆಯಾದ ಗ್ರಾಮಗಳ ಮನೆಮನೆಗೆ ಪ್ರತಿ ವ್ಯಕ್ತಿಗೆ 55ಲೀ.ನಷ್ಟು ನೀರನ್ನು ಪೂರೈಸುವುದು ಜೆಜೆಎಂ ಉದ್ದೇಶವಾಗಿದೆ. ಇದನ್ನು ಸಮರ್ಪಕವಾಗಿ ಕಾರ್ಯಗತವಾದಲ್ಲಿ ಯೋಜನೆಯ ಉದ್ದೇಶ ಈಡೇರಲಿದೆ ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಮಾತನಾಡಿ, ಜೆಜೆಎಂ ಯೋಜನೆಯಡಿ ಕೈಗೊಂಡ ಕಾಮಗಾರಿ ಸಮರ್ಪಕವಾಗಿ ನಿರ್ವಹಣೆ ಆಗಬೇಕು ಎಂದರು.
ಜೆಜೆಎಂ ತಂಡದ ನಾಯಕ ಡಾ.ನಂದಕುಮಾರ ತಾಂದಳೆ ಮಾತನಾಡಿ, 2024ರ ವೇಳೆಗೆ ಗ್ರಾಮೀಣ ಭಾಗದ ಪತ್ರಿಯೊಂದು ಮನೆಗೂ ನಳ ಸಂಪರ್ಕ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿವ ನೀರು ಒದಗಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಎಸ್‍ಎ ಶಾಖಾಧಿಕಾರಿ ಬಸವರಾಜ, ವಿಷಯ ನಿರ್ವಾಹಕಿ ಹೇಮಲತಾ ಸೇರಿದಂತೆ ಹಲವರು ಇದ್ದರು.