ಶುದ್ದ ನೀರಿನ ಘಟಕ ದುರಸ್ಥಿಗೊಳಿಸದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ

ಚಿತ್ರದುರ್ಗ,ಏ.16: ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿ ವರ್ಷವಾದರೂ ರಿಪೇರಿ ಮಾಡಿಸಿಲ್ಲ, ಈ ಬಗ್ಗೆ ಕೆಲಸಕ್ಕೆ ಬಾರದ ಸಬೂಬುಗಳನ್ನು ಹೇಳುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಜಿ.ಪಂ.ಸ್ಥಾಯಿ ಸೀಮಿತ ಅಧ್ಯಕ್ಷ ನರಸಿಂಹ ಆಗ್ರಹಿಸಿದರು.ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮೇದೆಹಳ್ಳಿ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಶುದ್ದ ಕುಡಿಯುವ ನೀರಿನ ಕೆಟ್ಟುಹೋಗಿದೆ. ಆದರೆ ಇದೂವರೆಗೂ ಕೂಡ ರಿಪೇರಿ ಮಾಡಿಸಿಲ್ಲ. ಯಾಕೆ ಈ ರೀತಿ ಎಂದು ಪ್ರಶ್ನಿಸಿದ ಅವರು, ಊರಲ್ಲಿ ರೌಡಿಸಂ ಮಾಡುತ್ತಾರೆ, ಗಲಾಟೆ ಮಾಡುತ್ತಾರೆ ಎಂದು ಹೇಳುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಸಂವಿಧಾನ ಪ್ರಕಾರ ಕೆಲಸ ಮಾಡಿ. ಅಡ್ಡಿಪಡಿಸಿದರೆ ಪೊಲೀಸ್ ಕೇಸು ಮಾಡಿ. ನೀವುಗಳು ಖಾಸಗಿಯವರಿಗೆ ಬೆಂಬಲ ನೀಡುತ್ತಿರುವುದಾಗಿ ಸಾಕಷ್ಟು ದೂರುಗಳು ಬರುತ್ತಿವೆ. ಇದು ನಿಲ್ಲಬೇಕು. ಗ್ರಾಮೀಣ ಜನರು ಹೆಚ್ಚಿನ ಹಣ ನೀಡಿ ನೀರು ಕುಡಿಯಲು ಕಷ್ಟ ಆಗುತ್ತದೆ. ನನ್ನ ಕ್ಷೇತ್ರದಲ್ಲೇ ಈ ರೀತಿ ಆದರೆ ಜಿಲ್ಲೆಯ ಇತರೆ ಗ್ರಾಮಗಳ ಕಥೆ ಏನು ? ಎಂದು ಕಿಡಿಕಾರಿದರು.ಮೇದೆಹಳ್ಳಿ ಗ್ರಾಮದಲ್ಲಿ ಪಿಡಿಓ ಬೆಳಗ್ಗೆ ಕಚೇರಿಗೆ ಬಂದು ತಮ್ ಕೊಟ್ಟು ಮನೆಗೆ ಹೋಗಿ ಕೂರುತ್ತಾರೆ ಅವರನ್ನು ಕರೆದು ಕೆಲಸ ಮಾಡಿಸಿ ಎಂದು ಸೂಚನೆ ನೀಡಿದರು. ಇನ್ನೂ ನೀರಗಂಟಿಗಳು ಊರಲ್ಲಿ ರಾಜಕೀಯ ಮಾಡುತ್ತಾ ಕೂರುತ್ತಾರೆ. ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು. ಒಟ್ಟಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಜನರಿಗೆ ನೀರು ಕೊಡುವ ಕೆಲಸ ಆಗಬೇಕು ಎಂದರು.ಜಿ.ಪಂ.ಅಧ್ಯಕ್ಷೆ ಮಾತನಾಡಿ, ಜಿಲ್ಲೆಯ ಎಲ್ಲಾ ಕಡೆ ಇರುವ ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಿಸಬೇಕ ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಕೋವಿಡ್ ಸಂದರ್ಭದಲ್ಲಿ ಶಾಲೆಗಳು ನಡೆದಿಲ್ಲ ಆದರೂ ಕೂಡ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕಳೆದ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರೂ ಕೂಡ ಇಲ್ಲಿಯ ವರೆಗೂ ಕ್ರಮ ಕೈಗೊಂಡಿಲ್ಲಾ ಏಕೆ ಎಂದು ಡಿಡಿಪಿಐ ವಿರುದ್ದ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹ ಕಿಡಿಕಾರಿದರು.ಶಾಲೆಗಳಲ್ಲಿ ಆಡಳಿತ ಮಂಡಳಿಯವರು ಮಕ್ಕಳಿಗೆ ಶುಲ್ಕ ಕಟ್ಟಿಲ್ಲ ಎಂದರೆ ಫೇಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನನ್ನ ಮಗನೆ ನನಗೆ ಕೇಳುತ್ತಾನೆ. ಈ ರೀತಿ ಮಾಡಿದರೆ ಮಕ್ಕಳ ಭವಿಷ್ಯ ಏನಾಗುತ್ತೇ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಾ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರ ನೀಡಿದ ಡಿಡಿಪಿಐ ರವಿಶಂಕರ್ ರೆಡ್ಡಿ ಈಗಾಗಲೇ ಎಲ್ಲಾ ಶಾಲೆಯ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಲಾಗಿದ್ದು, ಬೆದರಿಕೆ ಹಾಕಿದಲ್ಲಿ ಶಿಸ್ತು ಕ್ರಮ ಕೈಗೊಳುವುದಾಗಿ ತಿಳಿಸಿದರು.ಇಂದಿನ ಜಿ.ಪಂ.ಮಾಸಿಕ ಕೆಡಿಪಿ ಸಭೆಗೆ ಸಾಕಷ್ಟು ಇಲಾಖೆಯ ಅಧಿಕಾರಿಗಳು ಹಾಜರಾಗದೆ‌ ಇದ್ದದ್ದು ಅಧ್ಯಕ್ಷೆ ಶಶಿಕಲಾ ಕೆಂಗಣ್ಣಿಗೆ ಕಾರಣವಾಯಿತು.ಸಭೆಗೆ ಹಾಜರಾಗಲು ಒಂದು ವಾರ ಮುಂಚಿತವಾಗಿಯೇ ಅಧಿಕಾರಿಗಳಿಗೆ ಸೂಚನಾಪತ್ರವನ್ನು ನೀಡಲಾಗಿದೆ ಆದರೂ ಕೂಡ ಸಭೆಗೆ ಹಾಜರಾಗಿಲ್ಲ ಎಂದು ಅಧಿಕಾರಿಗಳ ವರ್ತನೆಯ ವಿರುದ್ದ ಕಿಡಿಕಾರಿದ ಅಧ್ಯಕ್ಷರು, ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ನೋಟಿಸ್ ಜಾರಿ ಮಾಡುವಂತೆ ಸಿಇಓ ಅವರಿಗೆ ಸೂಚನೆ ನೀಡಿದರು.