ಶುಚಿತ್ವದ ಬಗ್ಗೆ ಕಾಳಜಿ ವಹಿಸಲು ವಿದ್ಯಾರ್ಥಿನಿಯರಿಗೆ ಸಲಹೆ

ಚಿಕ್ಕನಾಯಕನಹಳ್ಳಿ, ಮೇ ೩೧- ಹೆಣ್ಣು ಮಕ್ಕಳು ತಮ್ಮ ಅಪ್ರಾಪ್ತ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಉಷಾ ಸಲಹೆ ನೀಡಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಋತುಚಕ್ರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಋತುಚಕ್ರ ಎನ್ನುವುದು ಹೆಣ್ಣಿಗೆ ನಿಸರ್ಗ ನೀಡಿದ ಕೊಡುಗೆಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ಮೌಡ್ಯಕ್ಕೆ ಒಳಗಾಗದೆ, ಶುಚಿತ್ವಕ್ಕೆ ಆದ್ಯತೆ ನೀಡಿ. ಆ ಸಮಯದಲ್ಲಿ ದೇಹದಲ್ಲಾಗುವ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಸಂಕುಚಿತ ಮನೋಭಾವದಿಂದ ಮುಕ್ತರಾಗಿ ಮಾನಸಿಕ ದೃಢತೆ ಬೆಳೆಸಿಕೊಂಡು ನಿರಾಳ ಮನೋಭಾವನೆಯನ್ನು ಹೊಂದಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಾಯಿತು. ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಅಧಿಕಾರಿ ಸದಾನಂದಸ್ವಾಮಿ ಉದ್ಘಾಟಿಸಿದರು. ಉಪನ್ಯಾಸಕರಾದ ಅನಿತಾಲಕ್ಷ್ಮಿ, ಪಲ್ಲವಿ, ಸಿದ್ದಲಿಂಗಮೂರ್ತಿ, ಚಂದ್ರಶೇಖರ್, ಆಪ್ತಸಮಾಲೋಚಕ ಎಸ್.ಟಿ. ನವೀನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.