‘ಶುಗರ್ ಫ್ಯಾಕ್ಟರಿ’ ರೋಮಾಂಟಿಕ್ ಕಥನ…

* ಚಿಕ್ಕನೆಟಕುಂಟೆ‌ ಜಿ.ರಮೇಶ್

“ಮನಸಾಲಜಿ” ಚಿತ್ರದ ಬಳಿಕ ನಿರ್ದೇಶಕ ದೀಪಕ್ ಅರಸ್ ರೋಮಾಂಟಿಕ್ ಆಗಿದ್ದಾರೆ. ಹೀಗಾಗಿಯೇ ಅವರು “ಶುಗರ್ ಫ್ಯಾಕ್ಟರಿ” ಯಲ್ಲಿ ತಲ್ಲೀನರಾಗಿದ್ದಾರೆ.

ಬರೋಬ್ಬರಿ ದಶಕದ ಬಳಿಕ “ಶುಗರ್ ಫ್ಯಾಕ್ಟರಿ” ಅಚ್ಚುಕಟ್ಟಾಗಿ ತೆರೆಯ ಮೇಲೆ ಕಟ್ಟಿಕೊಡುವ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಹಾಸ್ಯ ಮತ್ತು ರೋಮಾಂಟಿಕ್, ಯುವ ಪೀಳಿಗೆಯ ಈಗಿನ ಸಂಸ್ಕೃತಿಯ ವಿಷಯದ ಕಥೆ ಹೊಂದಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಚಿತ್ರ ಶೇ.70 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನೂ ಶೇ.30 ರಷ್ಟು ಚಿತ್ರೀಕರಣ ಬಾಕಿ ಉಳಿದುಕೊಂಡಿದೆ.ಕೊರೋನಾ ಸೋಂಕು ಹೆಚ್ಚಳ ಮತ್ತು ಲಾಕ್ ಡೌನ್ ಇಲ್ಲದಿದ್ದರೆ ಇಷ್ಟೊತ್ತಿಗೆ ಬಾಕಿ ಇರುವ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಮುಂದಿನ ಕೆಲಕ್ಕೆ ಅಣಿಯಾಗುತ್ತಿದ್ದರು.

ಬೆಂಗಳೂರು,ಗೋವಾ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದ್ದು ಇನ್ನೂ ಬೆಂಗಳೂರು, ಮೈಸೂರು, ಹಾಡು ಹಾಗು ಸನ್ನಿವೇಶದ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಇಚ್ಚೆಯೂ ಅವರಲ್ಲಿದೆ. ಹೀಗಾಗಿ ಅದಕ್ಕಾಗಿ ಸೂಕ್ತ ಸಮಯ ಎದುರು ನೋಡುತ್ತಿದ್ದಾರೆ.

ಶುಗರ್ ಫ್ಯಾಕ್ಟರಿ ಎನ್ನುವುದು ಒಂದು ಜಾಗದ ಹೆಸರು ಅದರ ಸುತ್ತ ನಡೆಯುವ ಕಥೆಯೇ ಹೊರತು, ಕಬ್ಬು, ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು ನಿರ್ದೇಶಕ ದೀಪಕ್ ಅರಸ್.

ಈಗಾಗಲೇ ಮುಕ್ಕಾಲು ಭಾಗದ ಚಿತ್ರೀಕರಣ ನಡೆಸಲಾಗಿದೆ. ಲಾಕ್ ಡೌನ್ ಸಂಬಂಧ ನಿಯಮ ಇಲ್ಲದಿದ್ದರೆ ಈ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಈಗ ಸೆಪ್ಟಂಬರ್ ಮತ್ತು ಅಕ್ಟೋಬರ್ ವರೆಗೂ ಕಾಯಬೇಕಾಗಿದೆ. ಮೂರು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನೂ ನಾಲ್ಕು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಎಲ್ಲೆಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತದೋ ನೋಡಿಕೊಂಡು ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದರು.

ಸದ್ಯದ ಪರಿಸ್ಥಿಯಲ್ಲಿ ಫ್ಯಾಮಿಲಿ ಆಡಿಯೆನ್ಸ್ ಸಿನಿಮಾ ಮಾಡಿದರೆ ಅದರಿಂದ ಚಿತ್ರತಂಡಕ್ಕೆ ಉಪಯೋಗವಾಗುವುದಿಲ್ಲ. ಸ್ಟಾರ್ ನಟರನ್ನು ಹಾಕಿಕೊಂಡ ಮಾಸ್ ಸಿನಿಮಾ ಮಾಡುವ ಆರ್ಥಿಕ ಶಕ್ತಿ ಇಲ್ಲ. ಹೀಗಾಗಿ ಯುವ ಜನರನ್ನು ಸೆಳೆಯುವ ಮತ್ತು ಅವರಿಗೆ ಇಷ್ಟವಾಗುವ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ವಿವರಣೆ ಅವರದು

ಸಂತೋಷ್ ರೈ ಪಾತಾಜೆ ಅದ್ಬುತ ಕ್ಯಾಮರ ಕೆಲಸ ಮಾಡಿದ್ದಾರೆ. ಕಭೀರ್ ರಫಿ ಸಂಗೀತವಿದೆ. ಚಿತ್ರದಲ್ಲಿ ನಾಯಕರಾಗಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರಿದ್ದು ಅದರಲ್ಲಿ ಅದ್ವಿತಿ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಹಾಗು ಮತ್ತೊಬ್ಬ ನಟಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇವರಲ್ಲದೆ ರಂಗಾಯಣ ರಘು, ಸೂರಜ್, ಗೋವಿಂದೇಗೌಡ ಮತ್ತಿತರಿದ್ದಾರೆ

ವಿಡಿಯೋ ಟೀಸರ್

ನಾಯಕ ಡಾರ್ಲಿಂಗ್ ಕೃಷ್ಣಾ ಅವರ ಜನ್ಮ ದಿನ ಜೂನ್ 12 ರಂದು ಹಾಗಾಗಿ ಚಿತ್ರತಂಡ ವಿಶೇಷವಾಗಿ ಚಿತ್ರೀಕರಣ ಮಾಡಿದ ತುಣುಕುಗಳೊಂದಿಗೆ ವಿಡಿಯೋ ಟೀಸರ್ ಬಿಡಲಾಗುತ್ತಿದೆ,ಇದೊಂದು ಹೊಸ ತನದ ಪ್ರಯತ್ನ ಎಂದರು ನಿರ್ದೇಶಕ ದೀಪಕ್ ಅರಸ್.