ಶೀಲ ಶಂಕಿಸಿ: ಹೆತ್ತ ಮಗಳು, ಹೆಂಡತಿಯನ್ನೇ ಕೊಂದ ಗಂಡ

ಸೇಡಂ,ಸೆ.23-ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಪಟ್ಟಣದ ಚಿಂಚೋಳಿ ಕ್ರಾಸ್ ನಲ್ಲಿರುವ ವಿಶ್ವನಗರದಲ್ಲಿ ಇಂದು ಬೆಳಿಗ್ಗೆ 3 ಗಂಟೆಗೆ ನಡೆದಿದೆ.
ದಿಗಂಭರ ತಂದೆ ಹಣಮಂತ ಕಲಬುರಗಿ ಎಂಬಾತನೆ ಪತ್ನಿ ಜಗದೀಶ್ವರಿ (ಭವಾನಿ) (35) ಮತ್ತು ಮಗಳು ಪ್ರಿಯಾಂಕಾ (11) ಅವರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಆರೋಪಿ ದಿಗಂಭರ ಕಲಬುರಗಿ ನಗರದ ರಾಮನಗರದಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡು ಉಪ ಜೀವನ ನಡೆಸುತ್ತಿದ್ದ, ಲಾಕ್ ಡೌನ್ ನಿಂದಾಗಿ ವ್ಯಾಪಾರ ನಡೆಯದಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಪತ್ನಿಯ ತವರೂರು ಸೇಡಂ ಪಟ್ಟಣಕ್ಕೆ ಆಗಮಿಸಿ ಚಿಂಚೋಳಿ ಕ್ರಾಸ್ ನಲ್ಲಿರುವ ವಿಶ್ವನಗರದಲ್ಲಿ ಪತ್ನಿ, ಮಗಳೊಂದಿಗೆ ನೆಲೆಸಿದ್ದ.
ದಿಗಂಭರ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪದೇ ಪದೇ ಜಗಳ ತೆಗೆಯುತ್ತಿದ್ದ ಎನ್ನಲಾಗಿದ್ದು, ಇದೇ ವಿಷಯಕ್ಕೆ ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಪತ್ನಿ-ಮಗಳನ್ನು ಕೊಲೆಗೈದ ವಿಷಯವನ್ನು ಸೇಡಂ ಪಟ್ಟಣದ ದೊಡ್ಡ ಅಗಸಿಯಲ್ಲಿರುವ ಪತ್ನಿಯ ತವರು ಮನೆಯವರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಆರೋಪಿ ದಿಗಂಭರ ಪತ್ನಿ-ಮಗಳನ್ನು ಕೊಲೆ ಮಾಡಿದ ವಿಷಯ ತಿಳಿಸಿದಾಗ ಇದನ್ನು ನಂಬಲಾಗದೆ ಕೊಲೆಯಾದ ಜಗದೀಶ್ವರಿ ಅವರ ಸಹೋದರ ಸುಭಾಷ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಕೊಲೆ ನಡೆದಿರುವುದು ತಿಳಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ವಿಷಯ ತಿಳಿದು ಸೇಡಂ ಸಿಪಿಐ ರಾಜಶೇಖರ ಹಳಿಗೋದಿ, ಪಿ.ಎಸ್.ಐ ಒಡಯರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ದಿಗಂಭರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.