ಶೀಘ್ರ 5 ಸಾವಿರ ಪೊಲೀಸ್ ಪೇದೆ ನೇಮಕಾತಿ

ಬೆಂಗಳೂರು,ಆ.೪- ರಾಜ್ಯದಲ್ಲಿ ಹೊಸದಾಗಿ ೫ ಸಾವಿರ ಪೊಲೀಸ್ ಪೇದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಹಾಗೆಯೇ ೫೪೫ ಪಿಎಸ್‌ಐ ಹುದ್ದೆ ಬಿಟ್ಟು ಮತ್ತೆ ಹೊಸದಾಗಿ ೪೫೦ ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸದ್ಯದಲ್ಲೇ ಪ್ರಾರಂಭಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಪೂರ್ಣಗೊಂಡ ತಕ್ಷಣವೇ ಪಿಎಸ್‌ಐ ನೇಮಕಾತಿ ಪರೀಕ್ಷೆಗಳ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.
ಗೃಹ ಸಚಿವರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅರಮನೆ ರಸ್ತೆಂiiಲ್ಲಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆದಿದ್ದ ಎಲ್ಲ ೫೬ಸಾವಿರ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು. ಆದರೆ, ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಮರುಪರೀಕ್ಷೆ ನಡೆಸುವುದು ತಡವಾದರೆ ವಯೋಮಿತಿ ಹೆಚ್ಚಳದಿಂದ ಅರ್ಹತೆ ಕಳೆದುಕೊಳ್ಳುವ ಭಯ ಬೇಡ. ಇಂತಹವರಿಗೆ ವಯಸ್ಸಿನ ಸಡಿಲಿಕೆ ನೀಡಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತೇವೆ ಎಂದರು.
ಈ ನೇಮಕಾತಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವ ಮೂಲಕ ಯಾವ ರೀತಿ ಪರೀಕ್ಷೆಗಳನ್ನು ನಡೆಸಬೇಕು ಎಂಬುದನ್ನು ತೋರಿಸಿಕೊಡುತ್ತೇವೆ ಎಂದು ಅವರು ಹೇಳಿದರು.
ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳು ಜೈಲಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ವೀಡಿಯೊ ನೋಡಿ ನನಗೆ ತುಂಬಾ ನೋವಾಯಿತು. ಕೂಡಲೇ ಕ್ರಮ ತೆಗೆದುಕೊಂಡು ಜೈಲಿನ ೧೫ ಸಿಬ್ಬಂದಿಯನ್ನು ಅಮಾನತು ಮಾಡಿ, ೩೦ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದೇವೆ. ಈಗ ಜೈಲಿನಲ್ಲಿ ಹೊಸ ಸಿಬ್ಬಂದಿ ಇದ್ದಾರೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡಿದ್ದೇವೆ ಎಂದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇನ್ನು ೨-೩ ತಿಂಗಳೊಳಗೆ ಜಾಮರ್ ಆಗುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವ ಶಪಥ ಮಾಡಿದ್ದೇನೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು.