ಶೀಘ್ರ ಸಂಪುಟ ವಿಸ್ತರಣೆ ಸಿಎಂ

ಬೆಂಗಳೂರು,ಜ.೧೮:ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಶೀಘ್ರ ಒಪ್ಪಿಗೆ ನೀಡಲಿದ್ದು, ವರಿಷ್ಠರು ಒಪ್ಪಿಗೆ ನೀಡಿದ ತಕ್ಷಣವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನಲ್ಲಿಂದು ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ವರಿಷ್ಠರೊಂದಿಗೆ ಹೆಚ್ಚು ಮಾತನಾಡಲು ಸಮಯ ಸಿಗಲಿಲ್ಲ. ಕಾರ್ಯಕಾರಿಣಿಗೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಬಗ್ಗೆಮಾತನಾಡಿದ್ದೆ. ಆದಷ್ಟು ಬೇಗ ಈ ಬಗ್ಗೆ ತಿಳಿಸುವುದಾಗಿ ವರಿಷ್ಠರು ಹೇಳಿದ್ದಾರೆ ಎಂದರು.ವರಿಷ್ಠರು ಹೇಳಿದಾಗ ಸಂಪುಟ ವಿಸ್ತರಣೆ ನಡೆಯಲಿದೆ. ವರಿಷ್ಠರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ವರಿಷ್ಠರೊಡನೆ ಚರ್ಚಿಸಿದ್ದೇನೆ. ೨ ದಿನ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಿತು. ಹಾಗಾಗಿ, ವರಿಷ್ಠರ ಜತೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ, ಮುಂಚಿತವಾಗಿಯೇ ಈ ಬಗ್ಗೆ ಮಾತನಾಡಿದ್ದೆ. ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.
ಕಾಂಗ್ರೆಸ್ ಹತಾಶ
ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಹಾಗಾಗಿ, ಜನರ ದಿಕ್ಕಿ ತಪ್ಪಿಸುವ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ನಾ ನಾಯಕಿ ಸಮಾವೇಶದಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ ೨ ಸಾವಿರ ನೀಡುವ ಕಾಂಗ್ರೆಸ್‌ನ ಯೋಜನೆ ಬಗ್ಗೆ ಪ್ರತಿಕ್ರಿಯಿಸುತ್ತ ಹೇಳಿದರು.ಈಗ ಯೋಜನೆಗಳನ್ನು ಘೋಷಣೆ ಮಾಡುತ್ತಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಏಕೆ ಈ ಯೋಜನೆಗಳನ್ನು ಜಾರಿ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ ಈಗ ಘೋಷಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕುಟುಂಬದ ಯಜಮಾನಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿದ್ದೆ. ಅದನ್ನೇ ಕಾಂಗ್ರೆಸ್‌ನವರು ಘೋಷಣೆ ಮಾಡಿದ್ದಾರೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ ಎಂದರು.ವಲಸಿಗ ಸಚಿವರೊಂದಿಗೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಕೀಳುಮಟ್ಟದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಭೇಟಿ ಸಹಜವಾಗಿಯೇ ನಮಗೆ ಹೆಚ್ಚಿನ ಕೆಲಸ ಮಾಡಲು ಪ್ರೇರಣೆಯಾಗುತ್ತದೆ ಎಂದರು.ಪ್ರಧಾನಿಗಳು ನಾಳೆ ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಯೋಜನೆ ಲೋಕಾರ್ಪಣೆ ಮಾಡಲಿದ್ದು, ಇದು ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಯೋಜನೆಯಾಗಿದೆ. ದೇಶದಲ್ಲೇ ಮಾದರಿ ಯೋಜನೆ ಎಂದರು.ಈ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರದ ಅನುದಾನದಿಂದ ಅನುಷ್ಠಾಗೊಳಿಸಲಾಗಿದೆ. ಏಷ್ಯದಲ್ಲೇ ಅತ್ಯಂತ ವಿಶಿಷ್ಟ ಯೋಜನೆ ಇದಾಗಿದೆ ಎಂದರು.
ಪ್ರಧಾನಿಗಳು ಬಂಜಾರ ಮತ್ತು ಲಮಾಣಿ ತಾಂಡಾಗಳಿಗೆ ಮನೆ ಹಕ್ಕುಪತ್ರ ವಿತರಿಸಲಿದ್ದಾರೆ. ಸುಮಾರು ೪-೫ ದಶಕಗಳ ಬೇಡಿಕೆಯಾಗಿದ್ದ ತಾಂಡಾಗಳನ್ನು ಗ್ರಾಮಗಳನ್ನಾಗಿ ಮಾಡುವುದು ಈಗ ಈಡೇರಿದಂತಾಗಿದೆ ಎಂದರು.ಅಲೆಮಾರಿಗಳಿಗೆ ಭದ್ರತೆ ಕೊಡುವಂತಹ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಅವರು ಹೇಳಿದರು.