ಶೀಘ್ರ ಪೌರಕಾರ್ಮಿಕರ ಬೇಡಿಕೆ ಈಡೇರಿಕೆ: ಎಂಟಿಬಿ ಆಶ್ವಾಸನೆ

ಬೆಂಗಳೂರು: ರಾಜ್ಯ ಪೌರ ನೌಕರರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಲಾಗುವುದು‌‌ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಇಂದು ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಪೌರ ನೌಕರರ ಸಂಘಟನೆಗಳ ಜೊತೆ ಸಚಿವರು ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನೌಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು 17 ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಖ್ಯಮಂತ್ರಿ ಜತೆ
ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆಯಾಗಿದೆ.
ಹಂತ ಹಂತವಾಗಿ ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.
ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಆರೋಗ್ಯ ಯೋಜನೆ ವಿಸ್ತರಣೆ ಮಾಡುವುದು, ಗುಂಪು ಮನೆಗಳು ಬೇಡ, ನಗರಸಭೆ ವ್ಯಾಪ್ತಿಯಲ್ಲಿ ಮನೆಗಳನ್ನು ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಮೂರು ವರ್ಷದ ರಾಜ್ಯ, ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲು ಜನೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಜನೋತ್ಸವದ ಮೂಲಕ‌ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.