ಶೀಘ್ರ ಪತ್ತೆ- ಸಂಪೂರ್ಣ ಚಿಕಿತ್ಸೆಯಿಂದ ಮಲೇರಿಯಾ ನಿರ್ಮೂಲನೆ ಸಾಧ್ಯ

ಶಿವಮೊಗ್ಗ ಏ 27: ಶೂನ್ಯ ಮಲೇರಿಯಾ ಗುರಿ ತಲುಪಲು ನವೀನ ವಿಧಾನಗಳನ್ನು ಅಳವಡಿಸಿ ಅನುಷ್ಠಾನೊಳಿಸುವ ಅಗತ್ಯವಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಅಭಿಪ್ರಾಯ ವ್ಯಕ್ತಪಡಿಸಿದರು.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಪೂಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಾಪೂಜಿ ನರ್ಸಿಂಗ್ ಕಾಲೇಜ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಶಿವಮೊಗ್ಗ ಮತ್ತು ನಗರದ ಎಲ್ಲಾ ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಬಾಪೂಜಿ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.ವರದಿಗಳ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 241 ಮಿಲಿಯನ್ ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿದ್ದು ಸುಮಾರು 6 ಲಕ್ಷ ಮರಣಗಳು ಸಂಭವಿಸುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಅಂಕಿ ಆಂಶಗಳನ್ನು ಅವಲೋಕಿಸಿದಾಗ ಮಲೇರಿಯಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಅಂದರೆ ಶೇ. 95 ರಷ್ಟು ಕಡಿಮೆಯಾಗಿದ್ದು, 2025 ರ ವೇಳೆಗೆ ಜಿಲ್ಲೆಯಿಂದ ಮಲೇರಿಯಾ ನಿರ್ಮೂಲನೆ ಮಾಡುವ ಗುರಿಯತ್ತ ಸಾಗುತ್ತಿರುವುದು ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯವರ ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ ಎಂದರು ಹಾಗೂ ಸ್ವಯಂರಕ್ಷಣಾ ವಿಧಾನ ಮತ್ತು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ರೋಗವಾಹಕ ಖಾಯಿಲೆಗಳ ನಿಯಂತ್ರಣದಲ್ಲಿ ಸಹಕರಿಸುವಂತೆ ಕೋರಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ ನಮ್ಮಲ್ಲಿ ಮಲೇರಿಯಾ ಇಲ್ಲದಿದ್ದರೂ ಉತ್ತರ ಭಾರತದಿಂದ ಜಿಲ್ಲೆಗೆ ಆಗಮಿಸುವ ವಲಸಿಗರ ಬಗ್ಗೆ ನಿಗಾವಹಿಸಿ ತಪ್ಪದೇ ರಕ್ತಲೇಪನ ಪರೀಕ್ಷೆಗೊಳಪಡಿಸುವಂತೆ ಸೂಚಿಸಿದರು.ರೋಟರಿ ಅಸಿಸ್ಟಂಟ್ ಗವರ್ನರ್ ರೊ.ಸುನಿತಾ ಶ್ರೀಧರ್ ಮಾತನಾಡಿ ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಸಹಕರಿಸಿದಂತೆ ಮಲೇರಿಯಾ ನಿರ್ಮೂಲನೆಗೂ ಸಹಕರಿಸಲು ರೋಟರಿ ಸದಾಸಿದ್ದವಿದೆ ಎಂದು ತಿಳಿಸಿದರು.