ಶೀಘ್ರ ಪಠ್ಯಗಳ ಪರಿಷ್ಕರಣೆ

ಬೆಂಗಳೂರು. ಜೂ. ೨- ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ಪಠ್ಯಗಳ ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಪ್ರಾರಂಭವಾಗಿವೆ. ಹಾಗಾಗಿ ಮಕ್ಕಳಿಗೆ ಯಾವುದು ಒಳ್ಳೆಯದೋ ಅದನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಪರಿಷ್ಕರಣೆ ಮಾಡುತ್ತೇವೆ. ಎಲ್ಲವನ್ನು ಬದಲಾವಣೆ ಮಾಡುವುದಿಲ್ಲ. ಯಾವುದು ಅಗತ್ಯ ಇದೆಯೋ ಅದನ್ನು ಮಾತ್ರ ಬದಲಾವಣೆ ಮಾಡುತ್ತೇವೆ ಎಂದರು.
ಶಾಲೆಗಳು ಆರಂಭವಾಗಿ ಪಠ್ಯ ಪುಸ್ತಕಗಳು ಮುದ್ರಣವಾಗಿರುವ ಈ ಸಂದರ್ಭದಲ್ಲಿ ಪಠ್ಯ ಪರಿಷ್ಕರಣೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಇಲ್ಲ, ಆ ರೀತಿ ಏನೂ ಆಗುವುದಿಲ್ಲ. ಕೆಲವೇ ಕೆಲವು ಪಠ್ಯಗಳನ್ನು ಮಾತ್ರ ಬದಲಾಯಿಸುತ್ತೇವೆ. ಸಮಗ್ರ ಪರಿಷ್ಕರಣೆ ಇರುವುದಿಲ್ಲ. ಅನೆಕ್ಚರ್‌ನಲ್ಲಿ ಪಠ್ಯ ಪರಿಷ್ಕರಣೆಯನ್ನು ಸೇರ್ಪಡೆ ಮಾಡುತ್ತೇವೆ ಎಂದು ತಿಳಿಸಿದರು.ಪಠ್ಯ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ಹೊಂದಿದ್ದಾರೆ. ನಾನು ಈಗಾಗಲೇ ಮುಖ್ಯಮಂತ್ರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಆದಷ್ಟು ಬೇಗ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದರು.
ಪಠ್ಯ ಪರಿಷ್ಕರಣೆ ಸಂಬಂಧ ತಜ್ಞರ ಸಮಿತಿ ರಚನೆ ಇನ್ನು ಆಗಿಲ್ಲ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಎಲ್ಲವನ್ನು ಪೂರ್ಣಗೊಳಿಸುವುದಾಗಿ ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಬದಲು
ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲು ಮಾಡುವ ಬಗ್ಗೆಯೂ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದೇವೆ. ಪ್ರಣಾಳಿಕೆಯಲ್ಲಿ ಏನೆಲ್ಲಾ ಹೇಳಿದ್ದೇವೋ ಅದನ್ನು ಮಾಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ. ಆ ಬಗ್ಗೆ ಈಗ ಮಾತನಾಡುವುದು ಬೇಡ. ಕಾನೂನಿನಂತೆ ಎಲ್ಲವೂ ಆಗಲಿದೆ. ಕಾನೂನು ಪ್ರಕಾರ ಏನೆಲ್ಲಾ ತೀರ್ಮಾನಗಳು ಆಗಲಿವೆ ಎಂಬುದನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.ಚುನಾವಣಾ ಪೂರ್ವದಲ್ಲಿ ನೀಡಿರುವ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಗಳು ಆಗುತ್ತವೆ ಎಂದು ಅವರು ತಿಳಿಸಿದರು.