ಶೀಘ್ರ ನ್ಯಾಯದಾನಕ್ಕೆ ಪ್ರಾಮಾಣಿಕ ಪ್ರಯತ್ನ ಅಗತ್ಯ

ರಾಣೆಬೆನ್ನೂರು,ಸೆ,20: ಕಕ್ಷಿದಾರರು ಅನೇಕ ಸಮಸ್ಯೆಗಳನ್ನು ಎದುರಿಸಿ, ಅಂತಿಮವಾಗಿ ಸೂಕ್ತವಾದ ನ್ಯಾಯ ಸಿಗುವುದೆಂಬ ನಿರೀಕ್ಷೆ ಮತ್ತು ಭರವಸೆಯೊಂದಿಗೆ, ನ್ಯಾಯಾಲಯಕ್ಕೆ ಬರುತ್ತಾರೆ, ಅವರ ನಿರೀಕ್ಷೆ ಹುಸಿಗೊಳಿಸದೆ ಶೀಘ್ರ ನ್ಯಾಯದಾನ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಿ ಬಸವರಾಜ್ ಕರೆ ನೀಡಿದರು.
ಅವರು ಇಲ್ಲಿನ ವಕೀಲರ ಸಂಘವು ಆಯೋಜಿಸಿದ್ದ ನ್ಯಾಯಮೂರ್ತಿಗಳ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ, ಸಮಸ್ಯೆಗೆ ಪರಿಹಾರ ಕಂಡುಕೊಂಡು, ಸೂಕ್ಷ್ಮವಾಗಿ ಪರಿಶೀಲಿಸಿ, ಅವಲೋಕಿಸಿ, ಯಾವುದೇ ಜಾತಿ, ಮತ, ಬೇಧ, ಭಾವ ಅನುಸರಿಸದೇ, ಕಾನೂನಾತ್ಮಕವಾಗಿ, ನ್ಯಾಯದಾನ ನೀಡಬೇಕು ಎಂದರು.
ನಿರಂತರ ಅಧ್ಯಯನ, ಸತತ ಪರಿಶ್ರಮ, ಸೂಕ್ಷ್ಮ ಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಮಾಜದಲ್ಲಿ ಪ್ರೀತಿ,ವಿಶ್ವಾಸ, ಗೌರವ ಪಡೆಯಬಹುದಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರುಡಿಕಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ನ್ಯಾಯಮೂರ್ತಿಗಳನ್ನು ಅಭಿನಂದಿಸಿ ಸನ್ಮಾನಿಸಿದರು.
ಸ್ಥಳೀಯ ನ್ಯಾಯಾಲಯದ, ಹಿರಿಯ ನ್ಯಾಯವಾದಿಗಳಾದ, ಪಿ.ವಿ. ಕೆಂಚರೆಡ್ಡಿ, ಈಶ್ವರಚಂದ್ರ ಕುಳೇನೂರ್, ಕೆ.ಎನ್. ಕೋರ ಧಾನ್ಯ ಮಠ, ಎಸ್.ಎಸ್. ಶಿರಗಂಬಿ, ನಾಗರಾಜ ಕುಡಪಲಿ, ನಂದಿನಿ ಜೋಶಿ, ಮತ್ತಿತರರು, ನ್ಯಾಯಮೂರ್ತಿಗಳ ಸೇವಾ ತತ್ಪರತೆ ಮತ್ತು ದಕ್ಷತೆ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ, ಹಾವೇರಿ, ಹಿರೇಕೆರೂರು, ಶಿಗ್ಗಾವಿ, ಸವಣೂರು, ಹಾನಗಲ್ ಮೊದಲಾದೆಡೆಗಳಿಂದ ಆಗಮಿಸಿದ್ದ, ವಕೀಲರು ಸಂಘಟನೆಯ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ಹಾವೇರಿ ಜಿಲ್ಲಾ ಸತ್ರ ನ್ಯಾಯಾಧೀಶ ಶ್ರೀಮತಿ ವನಮಾಲಾ ಯಾದವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ನ್ಯಾಯಾಲಯಗಳ, ನ್ಯಾಯಾಧೀಶರಾದ ಮಧುಸೋದನ್ ರಾಮ್, ಶ್ರೀಮತಿ ವಾಯ್. ಎಲ್. ಲಾಡ್ ಖಾನ್, ಶ್ರೀಮತಿ ನಿವೇದಿತಾ ಮುನವಳ್ಳಿ ಮಠ, ಕೆ. ಸಿದ್ದರಾಜು, ಸಿದ್ದರಾಜ್ ಒಣಕುದುರೆ, ಮೊದಲಾದವರು ಉಪಸ್ಥಿತರಿದ್ದರು.