ಶೀಘ್ರ ನಿಗಮ ಮಂಡಳಿ ಅಧ್ಯಕ್ಷ ಪಟ್ಟಿ ಪ್ರಕಟ

ಬೆಂಗಳೂರು, ನ. ೨೮- ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನು ೨-೩ ದಿನಗಳಲ್ಲಿ ಪ್ರಕಟಿಸಲಿದೆ. ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹುದ್ದೆ ನೇಮಕ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಜತೆ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲು ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜತೆ ಸಭೆ ನಡೆಸಿ ಸಂಭಾವ್ಯರ ಹೆಸರನ್ನು ಅಂತಿಮಗೊಳಿಸಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪಟ್ಟಿಯನ್ನು ಅಂತಿಮಗೊಂಡಿರುವ ಪಟ್ಟಿಯನ್ನು ಹೈಕಮಾಂಡ್‌ನ ಅನುಮೋದನೆ ಪಡೆದ ನಂತರ ಇನ್ನು ೨-೩ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದೆ.
ಮೊದಲ ಹಂತದಲ್ಲಿ ಸುಮಾರು ೪೦ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅಂತಿಮಗೊಳಿಸಲಾಗಿದ್ದು, ೨೫ ಶಾಸಕರಿಗೆ ಹಾಗೂ ೧೫ ಮಂಡಿ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನ ಸಿಗಲಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲ ಹಿರಿಯ ಶಾಸಕರ ಹೆಸರು, ನಿಗಮ ಮಂಡಳಿಗಳ ಹೆಸರು ಪಟ್ಟಿಯಲ್ಲಿದ್ದು, ಈ ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷ ಗಿರಿಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲಾಗಿದೆ. ಹಾಗಾಗಿ ಕೆಲ ಹಿರಿಯ ಶಾಸಕರುಗಳಿಗೂ ನಿಗಮ ಮಂಡಳಿ ಸ್ಥಾನ ಸಿಗಲಿದೆ.
ವಿಧಾನಸಭಾ ಸದಸ್ಯರ ಜತೆಗೆ ೩-೪ ಮಂದಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಿಗೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ. ಹಾಗೆಯೇ ಚುನಾವಣೆಯಲ್ಲಿ ದುಡಿದ ವಿವಿಧ ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೂ ನಿಗಮ ಮಂಡಳಿ ಅಧ್ಯಕ್ಷಗಿರಿ ಸಿಗಲಿದ್ದು, ಈ ತಿಂಗಳ ಒಳಗೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ನಿಶ್ಚಿತವಾಗಲಿದೆ.