(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೪:ರಾಜ್ಯಸರ್ಕಾರ ಘೋಷಿಸಿರುವ ೫ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮನೆ ಒಡತಿಗೆ ಮಾಸಿಕ ೨ ಸಾವಿರ ರೂ. ನೀಡುವ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಪ್ ಬಿಡುಗಡೆ ಮಾಡಿ ನೋಂದಣಿ ಪ್ರಕ್ರಿಯೆಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನ ಪರಿಷತ್‌ನಲ್ಲಿಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದಲೇ (ಆಗಸ್ಟ್ ೧೬ ಅಥವಾ ೧೭) ರಂದು ಫಲಾನುಭವಿಗಳ ಖಾತೆಗೆ ನೇರ ಹಣ ಪಾವತಿಸಲಾಗುವುದು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಗೊಂದಲ ಬೇಡ ಎಂದು ಮನವಿ ಮಾಡಿದರು.
ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರನ್ನು ಅದರಲ್ಲೂ ಮಹಿಳೆಯರನ್ನು ಕಾಪಾಡುವ ಹಿತದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿಯನ್ನು ಸರ್ಕಾರ ಪ್ರಕಟಿಸಿದೆ. ಅದನ್ನು ಜಾರಿ ಮಾಡುವುದು ಗ್ಯಾರಂಟಿ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.
ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾವುದೇ ಸರ್ವರ್ ಸಮಸ್ಯೆ ಇಲ್ಲ, ನಾಲ್ಕೈದು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಆಪ್ ಬಿಡುಗಡೆ ಮಾಡಿ ಆ ಮೂಲಕ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆಗೆ ಅಂದಾಜು ೩೦ ಸಾವಿರ ಕೋಟಿ ಅಗತ್ಯವಿದೆ. ಪ್ರಸಕ್ತ ಮುಂಗಡ ಪತ್ರದಲ್ಲಿ ೧೭,೫೦೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಮುಂದಿನ ತಿಂಗಳಿನಿಂದ ಜಾರಿ
ಆ. ೧೬ ಅಥವಾ ೧೭ ರಿಂದ ಫಲಾನುಭವಿಗಳ ಖಾತೆಗೆ ಹಣ
ಪ್ರತಿ ತಿಂಗಳು ೨ ಸಾವಿರ ಜಮೆ
ಮೂರ್‍ನಾಲ್ಕು ದಿನಗಳಲ್ಲಿ ಆಪ್ ಬಿಡುಗಡೆ
ಆ ಮೂಲಕ ನೋಂದಣಿ ಪ್ರಕ್ರಿಯೆ ಆರಂಭ
ಪ್ರಸಕ್ತ ಸಾಲಿನಲ್ಲಿ ೧೭,೫೦೦ ಕೋಟಿ ರೂ. ಹಣ ನಿಗದಿ