ಶೀಘ್ರ ಕುಡಿಯುವ ನೀರಿನ ದರ ಏರಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೧೭:ತೈಲ ಬೆಲೆ ಏರಿಕೆ ಬೆನ್ನಲ್ಲೆ ಕುಡಿಯುವ ನೀರಿನ ದರ ಏರಿಕೆಯೂ ಹೆಚ್ಚಾಗುವ ಸಾಧ್ಯತೆಗಳಿದೆ. ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನೀರಿನ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದೆ.
ಬೆಂಗಳೂರು ಜಲಮಂಡಳಿ ಕುಡಿಯುವ ನೀರಿನ ದರವನ್ನು ಶೇ. ೦ರಷ್ಟು ಹೆಚ್ಚಳ ಮಾಡುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಎಷ್ಟು ಪ್ರಮಾಣದಲ್ಲಿ ದರ ಏರಿಕೆಗೆ ಒಪ್ಪಿಗೆ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಸದ್ಯದಲ್ಲೇ ನೀರಿನ ದರ ಏರಿಕೆಯಾಗುವುದು ನಿಶ್ಚಿತ.
ಬೆಂಗಳೂರು ಜಲಮಂಡಳಿ ಕಳೆದ ೧೦ ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಹಾಗಾಗಿ. ದರ ಏರಿಕೆಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಹಿಂದೆ ಲೋಕಸಭಾ ಚುನಾವಣೆಯ ಮುನ್ನವೆ ಜಲಮಂಡಳಿ ದರ ಏರಿಕೆಗೆ ಮುಂದಾಗಿತ್ತಾದರೂ ಲೋಕಸಭಾ ಚುನಾವಣೆಯ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ದರ ಏರಿಕೆಗೆ ಒಪ್ಪಿರಲಿಲ್ಲ. ಈಗ ಲೋಕಸಭಾ ಚುನಾವಣೆ ಮುಗಿದಿದ್ದು, ಪೆಟ್ರೋಲ್-ಡೀಸಲ್ ಮಾರಾಟ ತೆರಿಗೆಯನ್ನು ಸರ್ಕಾರ ಹೆಚ್ಚಳ ಮಾಡಿದ್ದು, ಕುಡಿಯುವ ನೀರನ ದರವನ್ನು ಹೆಚ್ಚಳ ಮಾಡಲಿದೆ ಎಂದು ಹೇಳಲಾಗಿದೆ.ಬೆಂಗಳೂರು ಜಲಮಂಡಳಿ ಗೃಹ ಬಳಕೆ, ವಾಣಿಜ್ಯ ಬಳಕೆ ಸೇರಿದಂತೆ ನೀರಿನ ದರವನ್ನು ಶೇ. ೪೦ ರಷ್ಟು ಹೆಚ್ಚಳ ಮಾಡುವ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಒಪ್ಪಿದರೆ ನೀರಿನ ದರ ದುಬಾರಿಯಾಗಲಿದೆ.