ಶೀಘ್ರ ಕಬ್ಬು ಕಟಾವಿಗೆ ಒತ್ತಾಯ

ತಿ.ನರಸೀಪುರ: ಜ.18:- ತಾಲೂಕಿನಲ್ಲಿ ಅವಧಿ ಮೀರಿ ಬೆಳೆದಿರುವ ಕಬ್ಬು ಕಟಾವಿನ ವಿಳಂಬ ತಪ್ಪಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಬ್ಬು ಕಟಾವಿಗೆ ತುರ್ತು ಕ್ರಮಕೈಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿ,ಕಬ್ಬಿನ ತೂಕದಲ್ಲಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಬ್ಬಿನ ಶೀಘ್ರ ಕಟಾವಿಗೆ ಕ್ರಮಕೈಗೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ಕಬ್ಬಿನ ಬೆಳೆಗೆ ಪ್ರತಿ ಟನ್ ಗೆ 150 ರೂಗಳನ್ನು ಹೆಚ್ಚುವರಿಯಾಗಿ ನೀಡುತ್ತಿದೆ.ಆದರೆ,ಕಬ್ಬಿನ ಕಟಾವಿಗೆ ವಿಳಂಬ ಆಗುತ್ತಿರುವುದರಿಂದ ಕಬ್ಬಿನ ತೂಕದಲ್ಲೇ ಹೆಚ್ಚುವರಿ ಧನ ಸಹಾಯದ ಹಣಕ್ಕಿಂತಲೂ ಹೆಚ್ಚು ನಷ್ಟ ಆಗುವ ಸಾಧ್ಯತೆ ಇರುತ್ತದೆ.ಹಾಗಾಗಿ ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಸರ್ಕಾರ ಕ್ರಮಕೈಗೊಂಡಲ್ಲಿ ರೈತರಿಗೆ ಆಗುವ ನಷ್ಟವನ್ನು ತಗ್ಗಿಸಬಹುದು ಎಂದರು .
ಕಬ್ಬು ಕಟಾವಿಗೆ ವಿಳಂಬವಾದಲ್ಲಿ ವಿಳಂಬದ ಅವಧಿಗೆ ರೈತರ ಬ್ಯಾಂಕ್ ಸಾಲಕ್ಕೆ ಬಡ್ಡಿ ಪಾವತಿಸಬೇಕಾಗಿದೆ.ಹಾಗಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಮತ್ತಷ್ಟು ಹೊರೆ ಬೀಳಲಿದೆ.ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳಿಗೆ ಶೀಘ್ರ ಕಬ್ಬು ಕಟಾವಿಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮೂರು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುತ್ತಿದ್ದು,ರೈತರು ಅತ್ಯಂತ ಜಾಗರೂಕತೆಯಿಂದ ಮತ ಚಲಾಯಿಸಬೇಕು.ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಜಾರಿ,ರೈತರ ಆದಾಯ ದ್ವಿಗುಣ,ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಖಾತ್ರಿ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ನೀಡಿರುವ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ ಎಂದು ಕಟುಕಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್,ಅತ್ತಹಳ್ಳಿ ದೇವರಾಜ್, ಕಿರಗಸೂರುಶಂಕರ, ಬರಡನಪುರ ನಾಗರಾಜ್, ಪ್ರದೀಪ್ ಪ್ರಸಾದನಾಯಕ, ಪರಶಿವಮೂರ್ತಿ, ಅಪ್ಪಣ್ಣ, ಗುರುಸ್ವಾಮಿ, ಗೌರಿಶಂಕರ್, ರಾಜೇಶ್, ಕುಮಾರ್,ಶ್ರೀಮತಿ ರೂಪ, ಪ್ರಭುಸ್ವಾಮಿ, ಮತ್ತಿತರರು ಹಾಜರಿದ್ದರು.