ಶೀಘ್ರ ಎನ್ ಐಎ ಕಚೇರಿ ಆರಂಭ: ಡಿವಿಎಸ್ ವಿಶ್ವಾಸ

ಸುಳ್ಯ, ಜು.30- ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ತನಿಖಾ ದಳ ಶಾಖೆಯನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಈಗಾಗಲೇ ಸ್ಥಳ ವೀಕ್ಷಣೆ ನಡೆಯುತ್ತಿದೆ. ಶೀಘ್ರ ಎನ್ ಐಎ ಕೇಂದ್ರ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕೊಲೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ನಿವಾ ಸಕ್ಕೆ ಸಂಸದ ಡಿ.ವಿ.ಸದಾನಂದ ಗೌಡ ಅವರು ಇಂದು ಭೇಟಿ ನೀಡಿದರು.‌ಈ ವೇಳೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಪ್ರವೀಣ್ ಹತ್ಯೆ ತನಿಖೆ ಎನ್‌ಐಎಗೆ ವಹಿಸುವ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಗೃಹ ಇಲಾಖೆ ಪರಿಶೀಲನೆ ನಡೆಸಿ ತನಿಖೆ ನಡೆಸಲಿದೆ. ನಾವು ಮಂಗಳವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಘಟನೆಗಳನ್ನು ಗಮನಿಸಿ ನಮ್ಮದೇ ಸರಕಾರ ಸ್ವಲ್ಪ ದಿಟ್ಟ ಹೆಜ್ಜೆಯನ್ನಿಡಬೇಕಿತ್ತು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ನಾವು ಹಿಂದೆ ಬಿದ್ದಿದನ್ನು ಅವರು ಒಪ್ಪಿಕೊಂಡರು.
ಕೊಲೆಗೀಡಾದ ಪ್ರವೀಣ್‌ಗೆ ಬೆದರಿಕೆ ಬರುತ್ತಿತ್ತು. ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಿದ್ದರು.
ಆದರೂ ಪೊಲೀಸರು ಕಾರ್ಯಾಚರಣೆ
ನಡೆಸಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಇದು ಗಂಭೀರ ಪ್ರಶ್ನೆಯಾಗಿದೆ ಕಳವಳ ವ್ಯಕ್ತಪಡಿಸಿದರು.