ಶೀಘ್ರವೇ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸೂಚನೆ ಕಲಬುರಗಿ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಿ :ಸಚಿವ ಯೋಗೇಶ್ವರ

ಕಲಬುರಗಿ.ಏ.06:ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕಲಬುರಗಿ ಕೋಟೆ ಪ್ರದೇಶವನ್ನು ಶೀಘ್ರವೇ ಸ್ವಚ್ಛಗೊಳಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ರಾಜ್ಯದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ಕೋಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಲಬುರಗಿ ಕೋಟೆಯಲ್ಲಿರುವ ಮುಳ್ಳುಕಂಟಿ, ಕಸ-ಕಡ್ಡಿಗಳನ್ನು ಶುಚಿಗೊಳಿಸಿ. ಪ್ರವಾಸಿ ತಾಣವಾಗಿಸುವ ಮೂಲಕ ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.
ಕೋಟೆಯೊಳಗಿನ ಪ್ರದೇಶ 74.10 ಎಕರೆ ವಿಸ್ತೀರ್ಣದಲ್ಲಿ ಇದ್ದು, ಸ್ವಚ್ಛತಾ ಕಾರ್ಯದ ಮೂಲಕ ಐತಿಹಾಸಿಕ ಪ್ರದೇಶವಾದ ಕಲಬುರಗಿಗೆ ದೇಶ-ವಿದೇಶದ ಪ್ರವಾಸಿಗರನ್ನು ಕರೆತರುವಂತ ಕೆಲಸ ಮಹಾನಗರ ಪಾಲಿಕೆಯಿಂದ ಆಗಬೇಕು ಎಂದು ಅವರು ಸಲಹೆ ನೀಡಿದರು.
ಹಂಪಿಯಲ್ಲಿರುವ ಭಾರತೀಯ ಪುರಾತತ್ತ್ವ ಇಲಾಖೆಯ (ಪ್ರಭಾರ) ಅಧೀಕ್ಷಕ ಪುರಾತತ್ತ್ವವಿದರು ಎಂ.ಕಾಳಿಮುತ್ತು ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು ಕೋಟೆಯ ಸ್ವಚ್ಛತೆಗೆ ಅನುಮತಿ ಪಡೆದ 15 ದಿನದೊಳಗೆ ಕಾರ್ಯಕೈಗೊಳ್ಳಿ ಎಂದರು. ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ. 15 ದಿನಗಳ ನಂತರ ಮತ್ತೆ ನಗರಕ್ಕೆ ಖುದ್ದಾಗಿ ಬಂದು ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸುವೆ ಎಂದು ಅವರು ತಿಳಿಸಿದರು.
1367ರಲ್ಲಿ ನಿರ್ಮಿಸಲಾದ ಐತಿಹಾಸಿಕ ಜಾಮೀಯಾ ಮಸೀದಿ ವೀಕ್ಷಿಸಿ, ಅದರ ವಾಸ್ತುಶಿಲ್ಪ ಕಂಡು ಬೆರಗಾದರು. ಬೃಹದಾಕಾರದ ಕಂಬಗಳು, ಗೋಪುರ( ಡೂಮ್) ಮುಂತಾದವುಗಳ ವಾಸ್ತುಶಿಲ್ಪದ ಶೈಲಿಯನ್ನು ಸಚಿವರು ಕಣ್ತುಂಬಿಕೊಂಡರು. ಇನ್ನು ಸೆಂಟರ್ ಡೂಮ್ ಅಡಿಯಲ್ಲಿ ನಿಂತು ಮಾತನಾಡುವ ಮಾತು ಇಡೀ ಮಸೀದಿಯ ಒಳಾಂಗಣದ ಪರಿಸರದಲ್ಲಿ ಕೇಳುವ ವೈಶಿಷ್ಟ್ಯತೆ ಕರ್ಣಾನಂದ ಉಂಟು ಮಾಡಿತು. ಸ್ವತಃ ಸಚಿವರೇ 210 ಮೀಟರ್ ದೂರ ನಿಂತುಕೊಂಡರೂ ಸಹ ಕೇಂದ್ರ ಡೂಮ್‍ನಿಂದ ವ್ಯಕ್ತಿ ಮಾತನಾಡುವಾಗ ಅಷ್ಟು ದೂರದವರೆಗೂ ಸ್ಪಷ್ಟವಾಗಿ ಮಾತುಗಳನ್ನು ಕೇಳಿ ಸಚಿವರು ಆಶ್ಚರ್ಯ ಚಕಿತರಾದರು.
ಈ ಸಂದರ್ಭದಲ್ಲಿ ಕಲಬುರಗಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಶಂಭುಲಿಂಗ ವಾಣಿ ಅವರು ಕೋಟೆ ಹಾಗೂ ಮಸೀದಿಗಳ ನಿರ್ಮಾಣ ಇನ್ನಿತರ ಐತಿಹಾಸಿಕ ಮಹತ್ವದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಂತರ ಆದಷ್ಟು ಬೇಗ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿ ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್. ಥಳಕಿ, ಭಾರತೀಯ ಪುರಾತತ್ತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.