ಶೀಘ್ರವೇ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಆರಂಭ

ಚಿಕ್ಕಬಳ್ಳಾಪುರ,ಜೂ.೧೯-ಜಿಲ್ಲೆಯ ಜನತೆಗೆ ಅತಿ ಅವಶ್ಯಕವಾದ ಎಂಆರ್‌ಐ ಸ್ಕ್ಯಾನಿಂಗ್ ಸೇವೆಯನ್ನು ಅತಿ ಶೀಘ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಜೈನ್ ಮಿಷನ್ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಜೈನ್ ಮಿಷನ್ ಆಸ್ಪತ್ರೆ ಚೆರ್ಮನ್ ಆಡಿ. ನರಫತ್ ಸೋಲಾಂಕಿ ಹೇಳಿದರು.
ಅವರು ನಗರ ಜೈನ್ ಮಿಷನ್ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆಯ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇಡೀ ಜಿಲ್ಲೆಯಲ್ಲಿಯೇ ಎಂ. ಆರ್. ಐ. ಸ್ಕ್ಯಾನಿಂಗ್ ಇಲ್ಲವಾದ ಕಾರಣ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರಲ್ಲಿ ಜೈನ್ ಮಿಷಿನ್ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಚಿಕ್ಕಬಳ್ಳಾಪುರ ಜೈನ್ ಮಿಷೀನ್ ಟ್ರಸ್ಟ್ ಕಳೆದ ಎರಡು ವರ್ಷಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಲಾಭ ರಹಿತ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು ಅತಿ ಶೀಘ್ರದಲ್ಲಿಯೇ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಸಹ ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು ಕಿಡ್ನಿ ವೈಫಲ್ಯ ದಂತಹ ರೋಗಿಗಳಿಗೆ ದಾನಿಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುತ್ತಾ ಬಂದಿದ್ದು, ಇದಲ್ಲದೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಆಸ್ಪತ್ರೆ ಪ್ರಾರಂಭಕ್ಕೂ ಮುನ್ನ ದಿನಗಳಿಂದಲೂ ಸಹ ನೀಡುತ್ತಾ ಬಂದಿದ್ದು ಆಸ್ಪತ್ರೆ ಪ್ರಾರಂಭದ ನಂತರವೂ ಸಹ ಈ ಶಿಬಿರ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಇದು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಗೆ ಅತ್ಯಂತ ಉಪಯುಕ್ತಕರವಾಗಿದೆ ಎಂದರು.
ಮಾನವ ಸೇವಾ ಫಂಡ್ ಎಂಬ ವಿನೂತನ ದತ್ತಿಯೊಂದನ್ನು ಪ್ರಾರಂಭ ಮಾಡಲಾಗುತ್ತಿದ್ದು ಇದರ ಉದ್ದೇಶ ಎಂದರೆ ಹಣಕಾಸಿನ ಸೌಲಭ್ಯ ಇರದ ಮತ್ತು ಆರೋಗ್ಯ ಪಡೆಯಲು ಇಚ್ಛಿಸುವ ಕಡುಬಡವರು ಹಣ ಇಲ್ಲದೆ ಆಸ್ಪತ್ರೆಗೆ ಬಂದಾಗ ಮಾನವ ಸೇವಾ ಫಂಡ್ ಮೂಲಕ ಬರುವ ಬಡ್ಡಿ ಹಣದಲ್ಲಿ ಇಂತಹ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಜೈನ್ ಮಿಷನ್ ಆಸ್ಪತ್ರೆ ಕಾರ್ಯದರ್ಶಿ ಉತ್ತಮ್ ಚಂದ್ ಜೈನ್ ಮಾತನಾಡಿ ಕಳೆದ ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡು ಬರಲಾಗುತಿದೆ, ಮೊದಲ ೧೦೦ ಮಂದಿ ನೋಂದಾವಣೆ ಮಾಡಿಸಿಕೊಂಡವರಿಗೆ ಸುಮಾರು ೫೦೦ ರೂ ಬೆಲೆಯ ದೇಹ ಪರೀಕ್ಷೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದ್ದು ಸ್ಥಳೀಯ ಪತ್ರಕರ್ತರು ಸಹ ಬಳಸಿಕೊಳ್ಳಬಹುದು ಎಂದ ಅವರು ಎರಡು ವರ್ಷದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡಿದ ಆತ್ಮತೃಪ್ತಿ ಇದೇ ಸಹಕಾರ & ಬೆಂಬಲ ಮುಂದೆಯೂ ಇರಲಿ ಎಂದರು.
ಈ ಸಂದರ್ಭದಲ್ಲಿ ಜೈನ್ ಮಿಷಿನ್ ಆಸ್ಪತ್ರೆಯ ವ್ಯವಸ್ಥಾಪಕ ರಾಕೇಶ್ ಜೈನ್ ಸೇರಿದಂತೆ ಜೈನ್ ಮಿಷನ್ ಆಸ್ಪತ್ರೆ ಹಾಗೂ ಜೈನ್ ಮಿಷನ್ ಟ್ರಸ್ಟ್ ಪದಾಧಿಕಾರಿಗಳು ಸದಸ್ಯರು ಹಾಗೂ ವಿವಿಧ ವೈದ್ಯರು ಹಾಜರಿದ್ದರು.