ಶೀಘ್ರದಲ್ಲೇ ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ರಚನೆ:ಸಚಿವ ಕೋಟ

ಕಲಬುರಗಿ:ಮಾ.06: ರಾಜ್ಯ ಸರಕಾರವು ಈಡಿಗ- ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಅನ್ವಯಿಸುವಂತೆ ರಚನೆ ಮಾಡಿದ ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಶೀಘ್ರದಲ್ಲೇ ನಿರ್ದೇಶಕರ ಮತ್ತು ಅಧ್ಯಕ್ಷರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು
ನಿಗಮ ಘೋಷಣೆಯಾದ ಮೇಲೆ ಮೊಟ್ಟಮೊದಲ ಬಾರಿಗೆ ಕಲ್ಬುರ್ಗಿಗೆ ಆಗಮಿಸಿದ ಸಚಿವರನ್ನು ಕಲ್ಯಾಣ ಕರ್ನಾಟಕ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೆಚೂರ್ ನೇತೃತ್ವದಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾರ್ಚ್ 6 ರಂದು ನಿಯೋಗವು ಭೇಟಿ ಮಾಡಿ ಸನ್ಮಾನಿಸಿದ ಸಂದರ್ಭದಲ್ಲಿ ಸಚಿವರು ಮಾತನಾಡಿ ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ. ಪೂಜ್ಯ ಡಾ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಸಮುದಾಯದ ಇತರ ಅನೇಕ ಸಂಘಟನೆಗಳು,ಮುಖಂಡರು ಸೇರಿಕೊಂಡು ಸರಕಾರವನ್ನು ಒತ್ತಾಯಿಸಿದರ ಪರಿಣಾಮವಾಗಿ ನಿಗಮವು ರಚನೆಗೊಂಡಿದೆ ಶೀಘ್ರದಲ್ಲೇ ಎಲ್ಲ ಅಂಶಗಳನ್ನು ಪರಿಗಣಿಸಿ ಆರ್ಥಿಕ ನೆರವನ್ನು ಪ್ರಕಟಿಸಿ ಪೂರ್ಣ ಪ್ರಮಾಣದ ನಿಗಮವು ಕಾರ್ಯಾಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮಾತನಾಡಿ ನಿಗಮಕ್ಕೆ 500 ಕೋಟಿ ರೂಪಾಯಿಯನ್ನು ಘೋಷಣೆ ಮಾಡುವುದಲ್ಲದೆ ತಕ್ಷಣದಲ್ಲೇ ನಿರ್ದೇಶಕರನ್ನು ನೇಮಕ ಮಾಡಿ ಅತಿ ಶೀಘ್ರದಲ್ಲೇ ನಿಗಮವು ಕಾರ್ಯಾಚರಿಸಿ ಸಮುದಾಯದ ಏಳಿಗೆಗಾಗಿ ಕಾರ್ಯಪ್ರವೃತ್ತ ವಾಗಬೇಕು ಎಂದು ಅವರು ಮನವಿ ಮಾಡಿದರು. ಸಚಿವರು ನಿಯೋಗಕ್ಕೆ ಭರವಸೆಯನ್ನು ನೀಡಿದ್ದು ತಕ್ಷಣದಲ್ಲೆ ಪೂರ್ಣ ಪ್ರಮಾಣದ ನಿಗಮ ಅಸ್ತಿತ್ವಕ್ಕೆ ಬರುವುದಾಗಿ ಆಶಾಭಾವನೆ ಹೊಂದಿರುವುದಾಗಿ ಗುತ್ತೇದಾರ ಹೇಳಿದರು. ನಿಯೋಗದಲ್ಲಿ ಚಿತಾಪುರದ ವಿನೋದ್ ಗುತ್ತೇದಾರ್, ನಾಗಯ್ಯ ಗುತ್ತೇದಾರ್, ಶಿವಯ್ಯ ಪೇಟ ಶಿರೂರು, ಸುರೇಶ್ ಮಟ್ಟೂರ್, ಪ್ರವೀಣ್ ಜತ್ತನ್, ರಾಜೇಶ್ ಗುತ್ತೇದಾರ್, ಮಹೇಶ್ ಹೊಳಕುಂದ, ಶ್ರೇಯಾಂಕ್ ಪೆರ್ಲ, ಸಾಯಿನಾಥ ಮಹಾದೇವ ಗುತ್ತೇದಾರ್, ಮತ್ತಿತರರು ಇದ್ದರು ನಂತರ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ವಿಜಯಪುರ ಜಿಲ್ಲೆಗೆ ಪ್ರಯಾಣ ಬೆಳೆಸಿದರು.