’ಶೀಘ್ರದಲ್ಲೇ ದ.ಕ ಜಿಲ್ಲೆಯಲ್ಲಿ ಮೆಗಾ ಸೀ ಫುಡ್ ಪಾರ್ಕ್’

ಮಂಗಳೂರು, ನ.೨- ದ.ಕ. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ೧೦೦ ಕೋಟಿ ವೆಚ್ಚದ ಮೆಗಾ ಸೀ ಫುಡ್ ಪಾರ್ಕ್ ಶೀಘ್ರದಲ್ಲಿ ನಿರ್ಮಾಣ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನೆಹರೂ ಮೈದಾನದಲ್ಲಿ ನಿನ್ನೆ ನಡೆದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯು ವನ್ಯಜೀವಿಗಳಿಂದ ಸಂಭವಿಸುವ ಮಾನವ ಪ್ರಾಣಹಾನಿ ಪ್ರಕರಣಗಳಿಗೆ ಪ್ರಸ್ತುತ ಪಾವತಿಸಲಾಗುತ್ತಿದ್ದ ರೂ.೫.೦೦ ಲಕ್ಷಗಳ ದಯಾತ್ಮಕ ಧನವನ್ನು ರೂ.೭.೫೦ ಲಕ್ಷಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಯಾಯ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಸಧೃಢವಾಗಿರುವಂತಹ ಸಮೂಹ ಎ ವರ್ಗದ ದೇವಾಲಯಗಳ ನಿಧಿಯಿಂದ ದೇವಾಲಯಗಳ ಅರ್ಚಕರು ಹಾಗೂ ಸಿಬ್ಬಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ ಹಾಗೂ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ಊಟೋಪಚಾರವಿಲ್ಲದೆ ಬಳಲುತ್ತಿದ್ದ ಸುಮಾರು ೦೭ ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ೮ ಮೆಡಿಕಲ್ ಕಾಲೇಜುಗಳು ಸೇರಿದಂತೆ, ಒಟ್ಟು ೭೩ ಆಸ್ಪತ್ರೆಗಳು “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆ ಅಳವಡಿಸಿಕೊಂಡು ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಪ್ರಸ್ತುತ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಹಾಗೂ ಜಿಲ್ಲೆಯ ೮ ಮೆಡಿಕಲ್ ಕಾಲೇಜುಗಳೂ ಸೇರಿದಂತೆ ಒಟ್ಟು ೯ ಪ್ರಯೋಗಾಲಯಗಳು ಕೊರೊನಾ ಆರ್. ಟಿ.ಪಿ.ಸಿ.ಆರ್ ಪರೀಕ್ಷೆ ಸೌಲಭ್ಯ ಒದಗಿಸುತ್ತಿವೆ” ಎಂದು ಹೇಳಿದರು. ಕನ್ನಡ ಕಲಿಕೆಯ ಎಲ್ಲಾ ಆಸಕ್ತರಿಗೆ ಕನ್ನಡ ಕಲಿಕೆಗೆ ಒಂದು ವೇದಿಕೆ ನಿರ್ಮಾಣ ಮಾಡುವ ಉದ್ದೇಶದಿಂದ ಇ-ಕನ್ನಡ ಕಲಿಕಾ ಅಕಾಡೆಮಿಯನ್ನು ಸ್ಥಾಪಿಸಿ, ಪ್ರತ್ಯೇಕ ಅಂತರ್ಜಾಲ ವೆಬ್ ಸೈಟ್ ಅನ್ನು ಸಿದ್ಧಪಡಿಸಲಾಗಿದೆ. ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ನೂತನ ಕೈಗಾರಿಕಾ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ೫ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ೨೦ ಲಕ್ಷ ಉದ್ಯೋಗಗಳ ಸೃಷ್ಟಿಯ ನಿರೀಕ್ಷೆ ಇದೆ” ಎಂದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ಲಭಿಸಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ನಾಡಿನಲ್ಲಿ ಕನ್ನಡವನ್ನು, ಜೊತೆಗೆ ಜನ ಜೀವನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು, ಸರ್ವತೋಮುಖವಾಗಿ ಬೆಳೆಸಲು, ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕನ್ನಡ ನಾಡಿನಲ್ಲಿ ಕನ್ನಡದ ಮನಸ್ಸುಗಳು ನಿರ್ಮಾಣವಾಗಬೇಕು. ಕನ್ನಡ ಸಂಸ್ಕ್ರತಿಯನ್ನು ಅಭಿಮಾನಿಸಿ, ಪ್ರೀತಿಸುವ ಮನೋಭಾವ ನಮ್ಮಲ್ಲಿ ಬರಬೇಕು” ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೨೭ ಮಂದಿಗೆ ವೈಯುಕ್ತಿಕ ಹಾಗೂ ೧೧ ಸಂಘ-ಸಂಸ್ಥೆಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಾಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಕ.ಸಾ.ಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹಾಗೂ ಮ.ನ.ಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.