ಶೀಘ್ರದಲ್ಲೇ ಅರಕೇರಾ, ಮುಷ್ಟೂರು ರಸ್ತೆ ಕಾಮಗಾರಿ ಆರಂಭ -ಶಾಸಕ ಕೆಎಸ್‌ಎನ್

ದೇವದುರ್ಗ.ಜು.೨೯- ತಾಲೂಕಿನ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಅವರು ಅಭಿಪ್ರಾಯ ಪಟ್ಟರು.
ಗುರುವಾರದಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಂಗಿ ಗ್ರಾಮದ ೫೦ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೇಳೆ ಶಾಸಕರು ಮಾತನಾಡಿ, ತಾಲೂಕಿನಾದ್ಯಂತ ಮೂಲಭೂತ ಸೌಕರ್ಯಗಳಿಗೆ ಪ್ರಮುಖ ಆದ್ಯತೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಶಿವಂಗಿ ಗ್ರಾಮಕ್ಕೆ ಈಗಾಗಲೇ ೨.೫೦ ಕೋಟಿ. ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ನೂತನ ತಾಲೂಕು ಕೇಂದ್ರವಾದ ಅರಕೇರಾದಿಂದ ಮೂಷ್ಟೂರು ಗ್ರಾಮದ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿ ಸದ್ಯದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತೀಶ್ ಬಂಡೆಗುಡ್ಡ, ಜಹೀರ್ ಪಾಷ ಇಡಪನೂರು, ಗೋಪಾಲಕೃಷ್ಣ ಮೇಟಿ, ಮಲ್ಲಿಕಾರ್ಜುನ ಪಾಟೀಲ್ ಹಿರೇಬೂದೂರು, ನಾಗರಾಜ ಅಕ್ಕರಕಿ, ಬಸನಗೌಡ ವೆಂಕಟಾಪುರ, ಸತೀಶ್ ಜಾಜಿ, ಚಂದ್ರಶೇಖರ, ಹಜರತ್ತಲಿ ಸಾಬ್, ಕಾಸಿಂಅಲಿ, ಡಾ. ಸೂರಜ್, ಖಾಜಾಸಾಬ್ ನಾಗಡದಿನ್ನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.