ಶೀಘ್ರದಲ್ಲಿ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ : ಲಕ್ಷ್ಮಣ ಸವದಿ

ಅಥಣಿ:ಮಾ.23: ತಾಲೂಕಿನ ಪೂರ್ವ ಭಾಗದ 8 ಕೆರೆಗಳಿಗೆ ನೀರು ತುಂಬಿಸುವ 95 ಕೋಟಿ ರೂಪಾಯಿ ಅನುದಾನದ ಯೋಜನೆಯ 2ನೇ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ 300 ಲಕ್ಷ ರೂ ಅನುದಾನದ ಯಕ್ಕಂಚಿ- ಪಾರ್ಥನಹಳ್ಳಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನ ಪೂರ್ವಭಾಗದ ಅನೇಕ ಹಳ್ಳಿಗಳಿಗೆ ಜಲ ಮೂಲವಾಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವದರಿಂದ ಈ ಭಾಗದ ರೈತಾಪಿ ಜನರಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಕೋಹಳ್ಳಿ, ಅಡಹಳ್ಳಿ, ಐಗಳಿ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಕಕಮರಿಯ ಸಿದ್ದೇಶ್ವರ ಆಶ್ರಮದ ಹತ್ತಿರ 180 ಲಕ್ಷ ರೂ ವೆಚ್ಚದ ಅಥಣಿ ಕೊಟ್ಟಲಗಿ ರಸ್ತೆಯಿಂದ ಕೆಸ್ಕರ್ ದಡ್ಡಿ ಮಾರ್ಗವಾಗಿ ಐಗಳಿ ಗ್ರಾಮಕ್ಕೆ ಹೋಗುವ 4 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಕನ್ನಾಳ ಗ್ರಾಮದಲ್ಲಿ 100 ಲಕ್ಷ ರೂ ವೆಚ್ಚದ ಕನ್ನಾಳ ಪಡತರವಾಡಿ ರಸ್ತೆ ಅಭಿವೃದ್ಧಿಗೆ ಮತ್ತು ಪಡತರವಾಡಿ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ರಡ್ಡೇರಹಟ್ಟಿ ಗ್ರಾಮದಲ್ಲಿ 5 ಕೋಟಿ ರೂ ವೆಚ್ಚದ ಕಾಲುವೆ ದುರಸ್ತಿ ಕಾಮಗಾರಿಗೆ, ಸತ್ತಿ ಗ್ರಾಮದ ಜಿರೋ ಪಾಯಿಂಟ್ ಹತ್ತಿರ 3 ಕೋಟಿ ರೂ ವೆಚ್ಚದ ಮಹೇಶವಾಡಗಿ ರಸ್ತೆ ಕಾಮಗಾರಿಗೆ, ಹುಲಗಬಾಳಿ ಗ್ರಾಮದಲ್ಲಿ ಆಕಳಕಲ್ಲು ರಸ್ತೆ ಕಾಮಗಾರಿಗೆ, ದೊಡ್ಡವಾಡ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಗುರುದೇವ ತಪೆÇೀವನದ ಗುರುಪಾದ ಸ್ವಾಮೀಜಿ, ಮುಖಂಡರಾದ ಕಲ್ಲೇಶ ಮಡ್ಡಿ, ಮಹಾದೇವ ನಾಗನೂರ, ಪ್ರದೀಪ ನಂದಗಾವ, ಮಹಾಂತೇಶ ಬಾಡಗಿ, ಎಸ್ ಆರ್ ಘೊಳಪ್ಪನವರ, ರಾಜು ಆಲಬಾಳ, ಶೇಖರ ನೇಮಗೌಡ, ಅರ್ಜುನ್ ನಾಯಿಕ, ಮನೋಜ ರಾಠೋಡ, ವಿ ಎಸ್ ವಾಲಿ, ಸುನೀಲ ಚಮಕೇರಿ, ಕುಮಾರ ಚನ್ನರೆಡ್ಡಿ, ನಾನಾಗೌಡ ಪಾಟೀಲ, ಧರೇಪ್ಪ ದಳವಾಯಿ, ಮಲ್ಲು ಹುದ್ದಾರ, ಶಿವಗೊಂಡ ಸಾರವಾಡ, ಶ್ರೀಶೈಲ ಖೋತ, ಗುರುಬಸು ತವರಮನಿ, ಮುರಗೆಪ್ಪ ಭಾವಿ ನಿಂಗಣ್ಣ ಅಸ್ಕಿ, ಸಂಗಣ್ಣ ನೇಮಗೌಡ, ಬಸಪ್ಪ ಹೊಕ್ಕುಂಡಿ, ಭರತೇಶ ಪಾಟೀಲ, ಮಹಾದೇವ ಹೊಕ್ಕುಂಡಿ, ವಿಠೋಬಾ ನಾಗನೂರು, ಭೀಮಪ್ಪ ಕೊಕಟನೂರ, ಬಸಯ್ಯ ಪೂಜಾರಿ, ಗುರುಲಿಂಗಯ್ಯ ಹಿರೇಮಠ, ಸಂಗಮೇಶ ಪಲ್ಲಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಿಕೆಟ್ ಕೇಳುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ – ಲಕ್ಷ್ಮಣ ಸವದಿ
ಅಥಣಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ವರಿಷ್ಠರಿಗೆ ನಾನು ಇನ್ನೂ ಟಿಕೆಟ್ ಕೇಳಿಲ್ಲ. ಮತಕ್ಷೇತ್ರದ ವಿವಿಧ ಸಮುದಾಯಗಳ ಸಭೆ ಕರೆದು ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಮತಕ್ಷೇತ್ರದ ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ. ಕ್ಷೇತ್ರದ ಜನರು ಟಿಕೆಟ್ ಕೀಳುವಂತೆ ಹೇಳಿದರೆ ಕೇಳುತ್ತೇನೆ, ಬೇಡವೆಂದರೆ ಬಿಡುತ್ತೇನೆ ಎಂದು ಹೇಳಿದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ವರಿಷ್ಠರಲ್ಲಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದೇನೆ ಎಂದು ಅವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಅವರು ಕೂಡ ಪ್ರಬುದ್ಧರು, ಹಿರಿಯ ರಾಜಕಾರಣಿ, ಅವರು ಕೂಡ ದೊಡ್ಡವರು, ಜಿಲ್ಲೆಯಲ್ಲಿ ಸಾಹುಕಾರ ಎನಿಸಿಕೊಂಡರು. ನಾನು ಅವರ ಬಗ್ಗೆ ಪ್ರತಿಕ್ರೀಯಿಸುವದಾಗಲಿ, ಟೀಕೆ ಟಿಪ್ಪಣಿ ಮಾಡುವದಿಲ್ಲ ಎಂದು ಹೇಳಿದರು.